ಬೊಗಳೆ ಕನ್ನಡೊದ್ಧಾರಕರಿಗೆ ಕಾರಂತರ ಮಾತಿನೇಟು


ಶಿವರಾಮ ಕಾರಂತರನ್ನೊಮ್ಮೆ ನೋಡುವ ಹಾಗೂ ಅವರ ಮಾತು ಕೇಳುವ ಸೌಭಾಗ್ಯ ನನಗೂ ಅಂದು ಸಿಕ್ಕಿತ್ತು. ಮಂಡ್ಯದಲ್ಲಿ “ವಿವೇಕಾನಂದ ಯುವ ವೇದಿಕೆ” ಯೊಂದರ ಉದ್ಘಾಟನಾ ನಿಮಿತ್ತ ಅವರು ಬಂದಿದ್ದರು. ಆ ಮಹಾನ್ ದೈತ್ಯ ಪ್ರತಿಭೆಯ ನಾಲ್ಕು ಮಾತುಗಳನ್ನು ಕೇಳಿ ಜೀವನ ಸಾರ್ಥಕ ಮಾಡಿಕೊಳ್ಳಲೋ ಎಂಬಂತೆ ಇಡೀ ನಗರದ ಜನ ಸಾಗರವೇ ಅಲ್ಲಿ ತುಂಬಿತ್ತು. ಕಾರ್ಯಕ್ರಮವೂ ಶುರುವಾಯಿತು. ನಾವೆಲ್ಲಾ ಕಾರಂತರನ್ನೇ ನೋಡುತ್ತಾ, ಮಾತು ಕೇಳುತ್ತಾ ಕುಳಿತಿದ್ದೆವು. ಅಲ್ಲಿಯ ಯವ ಮಂಡಳಿಯ ಮುಖ್ಯಸ್ಥನೊಬ್ಬ ಎದ್ದು ಬಂದ, ತಮ್ಮ ವೇದಿಕೆಯ ವಿಚಾರಗಳನ್ನು ಮಂಡಿಸಲು ಮುಂದಾದ. ಸಮಾಜದ ಸಮಸ್ಯೆಗಳ ಸ್ಪಂದನಕ್ಕೆ ಬೇರೆ ಮಾರ್ಗವೇ ಇಲ್ಲ, ಇಂಥಹ ಯುವ ವೇದಿಕೆಗಳಿಂದ ಮಾತ್ರ ಏನನ್ನಾದರೂ ಮಾಡಲು ಸಾಧ್ಯವೇ ಹೊರತು, ವ್ಯಕ್ತಿಯೊಬ್ಬನಿಂದಾಗದು ಎಂಬುದು ಅವನ ನಿಲುವಾಗಿತ್ತು. ಹಾಗೇ ಅದನ್ನು ಸಮರ್ಥಿಸಿಕೊಳ್ಳಲು ಹೆಣಗಾಡಿ, ಕೊನೆಗೆ ಕೈಲಾಗದೇ ತನ್ನ ಮಾತು ಮುಗಿಸಿದ. ಕಾರಂತರ ಮುಖದಲ್ಲಿ ಪ್ರಖರವಾಗಿ ಪ್ರಜ್ವಲಿಸುತ್ತಿದ್ದ ಕಾಂತಿಯನ್ನೇ ದಿಟ್ಟಿಸುತ್ತಾ ಮುಂದಿನ ಮಾತುಗಳನ್ನಾಸಿಸಲು ನಾನೂ ಕೂತಿದ್ದೆ.

Dr. Shivaraama Kaarantha

ಆ ಯುವ ವೇದಿಕೆಯ “ಕಾರ್ಯದರ್ಶಿ” ಎಂದು ಹೇಳಿಕೊಳುತ್ತಾ ಇನ್ನೊಬ್ಬ ವೇದಿಕೆಯ ಮುಂದೆ ಬಂದು ತನ್ನ ಮಾತು ಶುರುಮಾಡಿದ. “ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಂಡು, ಅವರ ಹಾದಿಯಲ್ಲಿ ನಡೆದು, ಯುವ ಶಕ್ತಿಯನ್ನೆಲ್ಲಾ ಒಗ್ಗೂಡಿಸಿ ಈ ಸಮಾಜದ ಉದ್ಧಾರ ಮಾಡಬೇಕು, ಸಮಾನತೆಯ ದೊಡ್ಡ ಕ್ರಾಂತಿಯನ್ನೇ ಹಮ್ಮಿಕೊಂಡು ಎಲ್ಲರಿಗೂ ನ್ಯಾಯ ದೊರಕಿಸಿಕೊಡುವ ಕೆಲಸವನ್ನು ಈ ನಮ್ಮ ವೇದಿಕೆಯಿಂದಲೇ ಪ್ರಾರಂಭಿಸಿ, ಇಡೀ ದೇಶದಲ್ಲೇ ಮಾದರಿಯಾಗಬೇಕು” ಎಂದ. ಅವನ ಈ ಆವೇಶವನ್ನು ತದೇಕಚಿತ್ತರಾಗಿ ಆಲಿಸುತ್ತಾ, ಗಲ್ಲಕ್ಕೆ ಕೈ ಕೊಟ್ಟು, ಸಭಾಂಗಣದೊಳಗೆಲ್ಲಾ ಕಣ್ಣಾಡಿಸುತ್ತಾ ಕುಳಿತಿದ್ದರು ತೊಂಬತ್ತರ ಹರೆಯದ ಕಾರಂತಜ್ಜ. ನಾನವರನ್ನು ಹತ್ತಿರದಿಂದ ನೋಡುವ ಬಯಕೆಯಿಂದ ಹಾಗೇ ಮುಂದಿನ ಸಾಲುಗಳಿಗೆ ಮೆಲ್ಲಗೆ ಹೋಗುತ್ತಿದ್ದೆ.

ಕಾರ್ಯದರ್ಶಿಯಾಗಿದ್ದ ವ್ಯಕ್ತಿ ತನ್ನ ಮಾತುಗಳನ್ನು ಇನ್ನೂ ಮುಂದುವರೆಸಿ, “ನಮ್ಮ ಈ ವಿವೇಕಾನಂದ ಯುವ ವೇದಿಕೆಯಿಂದ ನಮ್ಮ ಕನ್ನಡ ದೇಶ ಕಟ್ಟುವ, ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸುವ ಕೆಲಸ ಮಾಡಿ ತೋರಿಸುವುದರ ಜೊತೆಗೆ, ಕನ್ನಡದ ಉದ್ಧಾರ ಮಾಡಬೇಕೆಂಬುದು ನಮ್ಮ ಗುರಿ…” ಅನ್ನುತ್ತಿದ್ದ. ಅಷ್ಟರಲ್ಲಿ ಇನ್ನೊಬ್ಬ ಬಂದು ಅವನ ಕಿವಿಯಲ್ಲಿ ಏನೋ ಹೇಳಿದ. ಬಹುಶಃ “ಕಾರಂತರಿಗೊಂದಷ್ಟವಕಾಶ ಕೊಡು” ಎಂದಿರಬೇಕೆಂದುಕೊಂಡೆ ನಾನು. ಅವನು ಹೇಳುತ್ತಿದ್ದಂತೆ ಈತ “ಇಷ್ಟೇಳಿ, ನನ್ನ ಎರಡು ಮಾತುಗಳನ್ನು ಕೇಳಿದ ತಮಗೂ, ಈ ಒಂದು ಕಾರ್ಯಕ್ರಮದಲ್ಲಿ ನಾಲ್ಕು ಮಾತುಗಳನ್ನು ಆಡಲು ಅವಕಾಶ ಮಾಡಿಕೊಟ್ಟ ಎಲ್ಲಾ ಪದಾಧಿಕಾರಿಗಳಿಗೂ, ಅಧ್ಯಕ್ಷರಿಗೂ ಹಾಗೂ ಜ್ಞಾನಪೀಠ ಪ್ರಶಸ್ತಿ ವಿಜೇತ ಶಿವರಾಮ ಕಾರಂತರಿಗೂ ನನ್ನ ವಂದನೆಗಳನ್ನು ತಿಳಿಸುತ್ತಾ, ಒಂದು ಕಾರ್ಯಕ್ರಮದ ಯಶಸ್ಸಿಗೆ ಮುಖ್ಯ ಎಂದರೆ ಪ್ರೇಕ್ಷಕರು, ನೀವಿಲ್ಲದೇ ಈ ಕಾರ್ಯಕ್ರಮ ……” ಅವನು ಮಾತು ಮುಗಿಸಿದ.

ನಂತರ ಕಾರಂತರ ಮಾತುಗಳನ್ನು ಕೇಳುವ ಅವಕಾಶ ನಮ್ಮೆಲ್ಲರದಾಗಿತ್ತು. ಎಲ್ಲರ ನಿರೀಕ್ಷೆಯಂತೆ ಅವರು ತಮ್ಮ ಮಾತು ಪ್ರಾರಂಭಿಸಿದರು. “ಈಗಷ್ಟೇ ಮಹಾಶಯರೊಬ್ಬರು ಮಾತನಾಡ್ತಾ ಹೇಳಿದ್ರು, ಈ ಕಾರ್ಯಕ್ರಮದಲ್ಲಿ ಮಾತಡೋ ಅವಕಾಶವನ್ನ ನಾನು ಅವರಿಗೆ ಕೊಟ್ಟೆ ಅಂತಾ. ನಿಜವಾಗಿಯೂ ಆ ಅವಕಾಶವನ್ನ ನೀವು ನನಗೆ ದಯಪಾಲಿಸಿದ್ದೀರಿ. ಇದು ನನ್ನ ಸುಕೃತ. ಅದಕ್ಕಾಗಿ ನಿಮಗೆಲ್ಲರಿಗೂ ಧನ್ಯವಾದಗಳು. ನಾನು ಬಹುಶಃ ನನ್ನ ವೃತ್ತಿ ಜೀವನದಲ್ಲಿ ಇಂಥಹ ಕಾರ್ಯಕ್ರಮದಲ್ಲಿ ಭಾಗವಹಿಸಿರೋದು ಇದೇ ಮೊದಲು. ನಿಮ್ಮೆಲ್ಲರ ಪ್ರೀತಿಯ ಆಹ್ವಾನ ನನ್ನನ್ನ ಇಲ್ಲಿ ತನಕ ಕರ‍್ಕೊಂಡು ಬಂದಿದೆ. ನಿಮ್ಮ ವಿಶ್ವಾಸವನ್ನ ನಾನು ಎಂದಿಗೂ ಮರೆಯೋ ಹಾಗಿಲ್ಲ.

ಇಲ್ಲಿ ಎಲ್ಲವನ್ನು ನೋಡ್ದೆ. ಎಲ್ಲರನ್ನೂ ನೋಡ್ದೆ. ನಾನು ಏನು ಮಾತಾಡ್ಲಿ ಅಂತಾ ಯೋಚಿಸ್ತಾ ಇದ್ದೀನಿ. ನಾನೂ ವಿವೇಕಾನಂದರ ಬಗ್ಗೆ ಸ್ವಲ್ಪ ಓದಿದ್ದೀನಿ. ಅವರ ಆದರ್ಶ ಇತ್ಯಾದಿಗಳ ಬಗ್ಗೆ ನೀವೆಲ್ಲಾ ಒಳ್ಳೆ ಮಾಹಿತಿ ಕೊಟ್ಟಿದ್ದೀರಿ, ಸಂತೋಷ. ನನ್ನ ದೃಷ್ಟಿನಲ್ಲಿ ನಾವು ಈ ಸಮಾಜದಲ್ಲಿ ಏನನ್ನಾದ್ರೂ ಮಾಡಬಹುದು ಅಂದ್ರೆ ಅದು ಬೇರೆಯವರಿಗೆ ಕೆಡಕು ಮಾಡ್ದೇ ಇರೋದು. ವಿವೇಕಾನಂದರ ಆದರ್ಶ ವಿವೇಕಾನಂದರಿಗಾಯ್ತು. ಸಾಮಾನ್ಯರಾದ ನಾವು ನಮ್ಮ ಹೆಂಡತಿಯರಿಗೆ ಒಳ್ಳೇ ಗಂಡಂದಿರಾಗಿ, ಈ ಸಮಾಜದಲ್ಲಿ ಒಳ್ಳೆ ಮನುಷ್ಯರಾಗಿ ಬದುಕಿ ತೋರಿಸಿಕೊಟ್ರೆ, ಅದೇ ನಾವು ಮಾಡೋ ನಿಜವಾದ ಸಮಾಜೋದ್ಧಾರ. ಇದು ನನ್ನ ಭಾವನೆ.

ಇನ್ನು ಕನ್ನಡದ ಉದ್ಧಾರದ ಬಗ್ಗೆ ಮಾತನಾಡಿದ್ರಿ. ನಿಮಗೆ ಕನ್ನಡದ ಬಗ್ಗೆ ಇರೋ ಅಭಿಮಾನ ನೋಡಿ ನನಗೆ ತುಂಬಾ ಸಂತೋಷ ಆಯ್ತು. ನಿಮ್ಮಂಥ ಯುವಕರು ಮುಂದಿನ ಪೀಳಿಗೆಗೆ ಮಾದರಿಯಾಗಿರಬೇಕು. ಕನ್ನಡದ ಕೆಲಸ ನಿರಂತರವಾಗಿ ನಡೀತಾ ಇರಬೇಕು. ಕನ್ನಡದ ಉದ್ಧಾರದಂಥ ದೊಡ್ಡ ಕೆಲಸ ನನ್ನಿಂದ ಸಾಧ್ಯವಾಗದೇ ಹೋದ್ರು, ಅದರ ಅಳಿಲು ಸೇವೆ ಮಾಡೋ ಸೌಭಾಗ್ಯ ಈ ಜನ್ಮದಲ್ಲಿ ನನ್ನದಾಯ್ತಲ್ಲ ಅನ್ನೋದೇ ನನಗೆ ಹೆಮ್ಮೆ…”

ಹೀಗೆ ಹೇಳಿ ತಮ್ಮ ಮಾತು ಮುಗಿಸಿದರು ಕಾರಂತರು. ಎರಡು ಮಾತುಗಳಲ್ಲಿ ನೂರು ಏಟು ಕೊಟ್ಟರೆನ್ನಿಸಿತು ನನಗೆ. ಆ ವೇದಿಕೆಯ ಪದಾಧಿಕಾರಿಗಳಿಗೇನೆನ್ನಿಸಿತೋ ನನಗೆ ತಿಳಿಯದು. ಆದರೆ, ಅತ್ಯಾವೇಶದಲ್ಲಿ ನಾವು ನಮ್ಮನ್ನೇ ಮರೆತು, ನೈಜತೆಯ ಗಡಿದಾಟಿ, ಇರುವಿಕೆಯ ಹೊರನಡೆದು ಬಾಯಿಗೆ ಬಂದಂತೆ ಮಾತನಾಡುವಾಗ, ಯಾರಿದ್ದಾರೆ? ಎಲ್ಲಿದ್ದೇವೆ? ಎಂಬುದನ್ನು ಹೇಗೆ ಮರೆಯುತ್ತೇವೆ ಎಂಬುದಕ್ಕೆ ಈ ಕಾರ್ಯಕ್ರಮ ಒಂದು ಉದಾಹರಣೆಯಾಗಿತ್ತು. ಕಾರಂತರಿಗೆ ತಿಳಿಯದ್ದೇನಿದೆ. ಬಾಲ ಪ್ರಪಂಚವನ್ನೇ ಕಟ್ಟಿದವರು ಅವರು. ತಮ್ಮ ಮಹಾನ್ ಕೃತಿಗಳಿಂದ ಕನ್ನಡ ಸಾಹಿತ್ಯಲೋಕವನ್ನು ಶ್ರೀಮಂತಗೊಳಿಸಿದವರು. ಕನ್ನಡ ತಾಯಿಯ ಹೆಮ್ಮೆಯ ಪುತ್ರರಲೊಬ್ಬರು. ಅಂಥಹ ಮಹಾನ್ ಚೇತನವೊಂದು “ವಿವೇಕಾನಂದರ ಆದರ್ಶಗಳ ಬಗ್ಗೆ ಒಳ್ಳೇ ಮಾಹಿತಿ ಕೊಟ್ಟಿರಿ ನೀವು” ಎಂದೇಳುವಷ್ಟು ಸೌಜನ್ಯ ತೋರಿಸಿದಾಗ ನನಗೆ ನಾವು “ಹುಲುಮಾನವ” ರೆನ್ನಿಸಿತು.

೧೮-೦೨-೨೦೧೦

You may also like...

Leave a Reply