ಅನಾಥವಾಗಿ ಹೋಗುತ್ತಿರುವ ಅಪರೂಪದ ಹಾಡುಗಳು


ಹಲವಾರು ಕಾರಣಗಳಿಂದ ಇಡೀ ವಿಶ್ವದಲ್ಲೇ ವಿಶಿಷ್ಟವಾದುದು ಭಾರತೀಯ ಚಿತ್ರರಂಗ. ಚಲನ ಚಿತ್ರಗಳಲ್ಲಿ ಹಾಡುಗಳೆಂಬ ಪರಿಕಲ್ಪನೆಯನ್ನು, ಬಹಶಃ ಭಾರತದಂಥಹ ಕೆಲವೇ ಕೆಲವು ದೇಶಗಳಲ್ಲಿ ಮಾತ್ರ ಕಾಣಲು ಸಾಧ್ಯ. ನಮ್ಮಲ್ಲಿ ಹಾಡುಗಳಿಗೆ ವಿಶೇಷವಾದ ಮಹತ್ವವಿದೆ. ಸಿನಿಮಾದಲ್ಲಿ ಹಾಡು ಒಂದು ಭಾಗವಾಗಿ ಬೆರೆತುಹೋಗುತ್ತದೆ. ಕೆಲವೊಮ್ಮೆ ಹಾಡುಗಳಿಂದಲೇ ಒಂದು ಚಿತ್ರದ, ಸನ್ನಿವೇಶದ, ಪಾತ್ರದ ಪರಿಚಯವಾಗಿಹೋಗುತ್ತದೆ. ಮಾತುಗಳಲ್ಲೇ ಎಲ್ಲವನ್ನೂ ಹೇಳಲು ಹಲವಾರು ಸಾರಿ ಸಾಧ್ಯವಾಗುವಿದಿಲ್ಲ. ಅಂಥಹ ಸಂದರ್ಭಗಳಲ್ಲೆಲ್ಲಾ ಹಾಡುಗಳು ಬಹಳ ಪರಿಣಾಮಕಾರಿಯಾಗಿ ಪ್ರೇಕ್ಷಕನಿಗೆ ಸಿನಿಮಾವನ್ನು ತಲುಪಿಸುವಲ್ಲಿ ಸಹಕಾರಿಯಾಗುತ್ತವೆ. ಈ ಹಾಡುಗಳೆನ್ನುವ ಕಲ್ಪನೆ ಬಹಳ ಪುರಾತನವಾದದ್ದು. ಅದು ಜಾನಪದವೆಂಬ ಬೇರಿನಿಂದ ಚಿಗುರೊಡೆದು, ಇಂದು ಎಷ್ಟು ಬೃಹದಾಕಾರವಾಗಿ ಬೆಳೆದು ನಿಂತುಬಿಟ್ಟಿದೆ ಎಂದರೆ, ನಮ್ಮಲ್ಲಿ ಹಾಡುಗಳಿಲ್ಲದ ಸಿನಿಮಾಗಳನ್ನು ಬಹುಶಃ ಯಾವ ಪ್ರೇಕ್ಷಕನೂ ಊಹಿಸಿಕೊಂಡಿರಲಾರ. ಹಾಡುಗಳನ್ನು ಕೇಳಿದ ನಂತರವೇ ಸಿನಿಮಾ ನೋಡುವವರಿದ್ದಾರೆ. ಹಾಡುಗಳನ್ನು ನೋಡವುದಕ್ಕೆಂದೇ ಸಿನಿಮಾಗೇ ಹೋಗುವವರಿದ್ದಾರೆ. ಹೀಗೇ ಹಾಡುಗಳು ನಮ್ಮಲ್ಲಿ ತಮ್ಮದೇ ಆದ ವರ್ಛಸ್ಸನ್ನು ಹೊಂದಿವೆ. ಹೀಗಿದ್ದರೂ, ಸಿನಿಮಾದಲ್ಲಿ ಬರುವ ಎಲ್ಲಾ ಹಾಡುಗಳೂ, ಎಲ್ಲರಿಗೂ ಇಷ್ಟವಾಗುವುದಿಲ್ಲ ಅಥವಾ ಎಲ್ಲಾ ಹಾಡುಗಳೂ ಪರಿಣಾಮಕಾರಿಯಾಗಿರುವುದಿಲ್ಲ ಅಥವಾ ಎಲ್ಲಾ ಹಾಡುಗಳನ್ನೂ ಸದುಪಯೋಗಿಸಿಕೊಂಡಿರುವುದಿಲ್ಲ. ಅಂಥಹ ಕೆಲವು ಹಾಡುಗಳನ್ನು ಒಮ್ಮೆ ನೋಡಿದರೆ ನಮ್ಮಲ್ಲಿ ಕೆಲವು ನಿರ್ದೇಶಕ ಮಹಾಶಯರಿಗೆ ಹಾಡುಗಳನ್ನು ಸಮರ್ಥವಾಗಿ ಬಳಸಿಕೊಳ್ಳಬಹುದಾದ ಪ್ರತಿಭೆಯ ಕೊರತೆಯಿರುವ ಸತ್ಯ ತಿಳಿದು ಬೇಸರವಾಗುತ್ತದೆ.

ಕನ್ನಡದಲ್ಲೂ “ಜನ್ಮ ನೀಡಿದ ಭೂತಾಯಿಯ ನಾ ಹೇಗೆ ತಾನೆ ಮರೆಯಲಿ”, “ಬಾನಿಗೊಂದು ಎಲ್ಲೆ ಎಲ್ಲಿದೆ”, “ಆಗದು ಎಂದು, ಕೈಲಾಗದು ಎಂದು”, “ಪ್ರೀತಿನೇ ಆ ದ್ಯಾವ್ರು ತಂದ”, “ಮೂಕ ಹಕ್ಕಿಯು ಹಾಡುತಿದೆ”, “ಪೋಗದಿರೆಲೋ ರಂಗಾ”, “ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ”, “ತೆರೆದಿದೆ ಮನೆ ಓ ಬಾ ಅತಿಥಿ”, “ಗಗನವು ಎಲ್ಲೋ ಭೂಮಿಯು ಎಲ್ಲೋ”, “ಕಥೆ ಹೇಳುವೆ ನನ್ನ ಕಥೆ ಹೇಳುವೆ”, “ನಲಿವಾ ಗುಲಾಬಿ ಹೂವೇ”, “ಕಂಗಳು ತುಂಬಿರಲು” ಹೀಗೆ ಪಟ್ಟಿ ಮಾಡುತ್ತಾ ಹೋದರೆ ಮುಗಿಯಲಾರದಷ್ಟು ಕನ್ನಡ ಚಿತ್ರಗೀತೆಗಳ ಮಹಾಸಾಗರವೇ ನಮ್ಮ ಕಣ್ಮುಂದೆ ಕಾಣುತ್ತದೆ. ಇವೆಲ್ಲಾ ಕನ್ನಡ ಚಲನಚಿತ್ರಗಳಲ್ಲಿ ಅತೀ ಪರಿಣಾಮಕಾರಿಯಾಗಿ ಬಳಸಿಕೊಂಡ ಕೆಲವೇ ಹಾಡುಗಳ ಉದಾಹರಣೆ. ಈ ಮೇಲಿನ ಎಲ್ಲಾ ಹಾಡುಗಳಲ್ಲೂ ನಿರ್ದೇಶಕರ ಶ್ರಮ, ಜಾಣ್ಮೆ ಹಾಗೂ ಪ್ರತಿಭೆ ಅದೆಷ್ಟು ಶಕ್ತಿಯುತವಾಗಿದೆ ಎಂದರೆ, ಈ ಹಾಡುಗಳನ್ನು ಹೊರಹಾಕಿ ಸಿನಿಮಾ ಊಹಿಸಿಕೊಳ್ಳಲೂ ಆಗದಷ್ಟು. ಸಿನಿಮಾದ ನೈಜ ನಿರೂಪಣೆಯ ಕೊಂಡಿಯೊಂದು ಕಳಚಿಕೊಂಡು, ಇಡೀ ಚಿತ್ರವೇ ಇಬ್ಭಾಗ, ಬಹುಭಾಗವಾಗಿಹೋದಷ್ಟು. ಅಂಥಹ ಸನ್ನಿವೇಶಗಳನ್ನೂ, ಹಾಡುಗಳನ್ನೂ ಸೃಷ್ಟಿಸಿ, ಅಷ್ಟೇ ಸೊಗಸಾಗಿ ಚಿತ್ರಿಸಿ, ಪ್ರೇಕ್ಷಕರನ್ನು ರಂಜಿಸಿವಲ್ಲಿ ಅವರೆಲ್ಲಾ ಯಶಸ್ವಿಯಾಗಿದ್ದರು. ಆದರೆ, ಇಂಥಹ ಪ್ರತಿಭಾವಂತ ನಿರ್ದೇಶಕರಿಗೆ ತಧ್ವಿರುದ್ಧವಾಗಿ ಕೆಲವು ನಿರ್ದೇಶಕರು ಅತ್ಯಮೂಲ್ಯವೂ, ಅಪರೂಪವೂ ಆದ ಕೆಲವು ಅಪರಂಜಿ ಮೌಲ್ಯದ ಹಾಡುಗಳನ್ನು ಗುಲಗಂಜಿ ಮಟ್ಟಕ್ಕಿಳಿಸಿರುವ ಕೆಲವು ಉದಾಹರಣೆಯನ್ನು ನೋಡಿದಾಗ, ಅತೀ ದುಃಖವಾಗುವುದರ ಜೊತೆಗೆ, ಕೋಪವೂ ಬರುತ್ತದೆ. ಅವರ ಅಸಮರ್ಥತೆಯನ್ನು ಕಂಡು, ಕೈಲಾಗದವ ಮೈ ಪರಚಿಕೊಂಡಂತೆ, ಅಂದವಾದ ಹಾಡುಗಳನ್ನು ಹಾಳು ಮಾಡಿರುವಕ್ಷಮ್ಯಾಪರಾಧಕ್ಕಾಗಿ ಶಿಕ್ಷಿಸಬೇಕೆನಿಸಿತ್ತದೆ.

ಅತ್ಯಂತ ನೀರಸವಾಗಿ, ಅಷ್ಟೇ ಅಲ್ಲದೇ ಪಾತ್ರವನ್ನೂ ಹಾಗೂ ಪಾತ್ರದ ನಟನೆಯನ್ನೂ ಅತೀ ಕಳಪೆಯಾಗಿ, ದುಃಖದ ಗೀತೆಯೊಂದನ್ನು ನೋಡುವಾಗ ನಗುವಷ್ಟು ನಿಸ್ತೇಜವಾಗಿ ಚಿತ್ರಿಸಿರುವ “ಪ್ರೇಮ ತರಂಗ”ದ “ನೀ ಹೀಂಗ ನೋಡ ಬ್ಯಾಡ ನನ್ನ”, ವಿಚಿತ್ರವೆಂದೆನಿಸುವ ಸೆಟ್ಟಿಂಗ್‍ನಿಂದ ನೋಡುಗರನ್ನು ಯಾವುದೇ ರೀತಿಯಲ್ಲೂ ಆಕರ್ಷಿಸದ “ಅರಿಸಿಣ ಕುಂಕುಮ”ದ “ಇಳಿದು ಬಾ ತಾಯೀ ಇಳಿದು ಬಾ”, ಕಾವೇರಿ ಪಕ್ಕದಲ್ಲೇ ಇದ್ದರೂ, ಹತ್ತಿರ ಹೋಗಿ ಚಿತ್ರಿಸಲಾಗದ ಅಸಮರ್ಥ ಚಿತ್ರತಂಡ ಉಪಯೋಗಿಸಿಕೊಂಡಿರುವ “ಸೋಲಿಲ್ಲದ ಸರದಾರ”ದ “ಕಾವೇರಮ್ಮ, ಕಾಪಾಡಮ್ಮ”, “ಸೋತು ಗೆದ್ದವಳು”ವಿನಲ್ಲಿ ಕುವೆಂಪು ಅವರ ರಸಿಕರೆದೆಯನ್ನು ನಾಟಿ ನಲಿಸಬಲ್ಲ “ಕೆಂಪು ಗುಲಾಬಿಯ ಚೆಂದುಟಿ ಚೆಲುವೆ”ಯಂಥಹ ಹಾಡಿನಲ್ಲಿ ತೋರಿಸಿರುವ ಅರಸಿಕತನ , ಕೇಳಿದ ಮಾತ್ರದಲ್ಲೇ ಮನ ಮುಟ್ಟಿ, ಮನದನ್ನೆಯಾಗುವ ಹುಡುಗಿಯನ್ನು ಅಪ್ಪಿ ಮನಸಾರೆ ಮುದ್ದಾಡಬೇಕೆನ್ನಿಸುನ ನರಸಿಂಹಸ್ವಾಮಿಯವರ “ನಿನ್ನೊಲುಮೆಯಿಂದಲೇ” ಎಂಬ ಒಲವಿನ ಗೀತೆ, “ಮಾಂಗಲ್ಯ ಭಾಗ್ಯ”ದಲ್ಲಿ ಹಾಳುಮಾಡಿರುವ “ಆಸೆಯ ಭಾವ, ಒಲವಿನ ಜೀವ”, ಅಲ್ಲದೇ ರಾಜೇಂದ್ರಸಿಂಗ್ ಬಾಬು ರವರಂಥ ಸಮರ್ಥರೂ ಶ್ರದ್ಧೆಯಿಲ್ಲದೆ ಮಾಡಿರುವ ಮಹಾಪುರುಷ”ನ “ಈ ಭೂಮಿ ಬಣ್ಣದ ಬುಗುರಿ” ಹೀಗೇ ಸುಮಾರು ಹಾಡುಗಳು ಉದಾಹರಣೆಯಾಗಿ ನಿಲ್ಲುತ್ತವೆ. ವಿಚಿತ್ರವೆಂದರೆ, ಹಾಡುಗಳನ್ನು ಅರ್ಥವತ್ತಾಗಿ ಬಳಸಿಕೊಂಡು, ಅವುಗಳನ್ನು ಅತೀ ಸೊಗಸಾಗಿ ಚಿತ್ರಿಸುವುದರಿಂದಲೇ ಪ್ರಸಿದ್ಧರಾಗಿದ್ದ ಪುಟ್ಟಣ್ಣನವರೂ ಸಹ “ಅಮೃತ ಘಳಿಗೆ” ಯಲ್ಲಿ “ಹಿಂದೂ ಸ್ಥಾನವು ಎಂದೂ ಮರೆಯದ (Male version)” ಎಂಬ ಮೈನವಿರೇಳಿಸುವಂಥಹ ಹಾಡಿನಲ್ಲಿ ನ್ಯಾಯ ಒದಗಿಸಿಲ್ಲ. ಆ ಹಾಡಿನಲ್ಲಿ ಕವಿಯ ಆಶಯವನ್ನು ಕೇಳಿದಾಗ ಆಗುವ ರೋಮಾಂಚನ, ಹಾಡು ನೋಡುವಾಗ ಮಾತ್ರ ನೀರಸ ಎಂದೆನಿಸುತ್ತದೆ. ಇವಿಷ್ಟು ಕೆಲವು ಉದಾಹರಣೆಗಳಷ್ಟೇ. “ಮೂಡಲ ಮನೆಯ ಮುತ್ತಿನ  ನೀರಿನ”, “ಆಕಾಶವೇ ಬೀಳಲಿ ಮೇಲೆ”, “ಗಗನವು ಎಲ್ಲೋ, ಭೂಮಿಯು ಎಲ್ಲೋ”, “ಆಡಿಸಿ ನೋಡು, ಬೀಳಿಸಿ ನೋಡು”, “ಎಂಥ ಸೌಂದರ್ಯ ಕಂಡೆ”, “ಜೀವ ವೀಣೆ ನೀಡು ಮಿಡಿತದ ಸಂಗೀತಾ”, “ಒಲವಿನ ಉಡುಗೊರೆ ಕೊಡಲೇನು” ಮುಂತಾದ ಹಾಡುಗಳನ್ನು ನೋಡಿಯೂ ಕಲಿಯದಿರುವ ಅಪ್ರಬುದ್ಧರ ಅತಿರೇಕವೆನಿಸುವ ಹಲವಾರು ಹಾಡುಗಳು ನಮ್ಮ ಇತಿಹಾಸದ ಬತ್ತಳಿಕೆಯಲ್ಲಿವೆ. ಹುಡುಕ ಹೋದರೆ ದುಃಖದ ಹಾಡುಗಳಲ್ಲಿ “ಗೊಳ್ಳೋ” ಎಂದು ಅಳಲೇಬೇಕು ಎಂಬ ಸಿದ್ಧಾಂತವನ್ನು ಬಲವಾಗಿ ನಂಬಿ, ಪ್ರೇಕ್ಷಕರು ನಗುವಂತೆ ಚಿತ್ರಿಸುರುವ ಬೇಕಾದಷ್ಟು ಹಾಡುಗಳ ಪಟ್ಟಿಯೂ ನಮಗೆ ಸಿಗುತ್ತದೆ.

ಆದರೆ, ಇವೆಲ್ಲಾ ಇದುವರೆಗೂ ನಡೆದು ಹೋಗಿರುವ ಹಾಗೂ ಮತ್ತೆ ಸರಿ ಮಾಡಲಾಗದಿರುವ ಪ್ರಮಾದಗಳಾಗಿರುವುದರಿಂದ, ಇವನ್ನೆಲ್ಲಾ ಮರೆತು ಮುಂದಿನದನ್ನು ನೋಡಿದರೆ, ತನ್ನ ಅರ್ಥಪೂರ್ಣ ಚಿತ್ರೀಕರಣದಿಂದಾಗಿ ನಲಿ-ನಲಿಯಬೇಕಾಗಿದ್ದ ಇತ್ತೀಚಿನ ಸಾವಿರಾರು ನವ-ನವೀನ ಹಾಡುಗಳಂತು ಅತೀಯಾದ ಗ್ರಾಫಿಕ್ಸ್ ನ ಹಾವಳಿಯಲ್ಲಿ ಸಿಕ್ಕಿ ನಲುಗಿಹೋಗುತ್ತಿರುವುದನ್ನು ನೋಡಿದಾಗ ತುಂಬಾ ಬೇಸರವಾಗುತ್ತದೆ. ಅವುಗಳನ್ನು ತೆರೆಯ ಮೇಲೆ ನೋಡಿದಾಗ ಬರಹಗಾರನಿಗೆ ಅದೆಷ್ಟು ನೋವಾಗಬಹುದೆಂದು ಊಹಿಸಲಾಗುವುದಿಲ್ಲ. ನೋಡುಗನಿಗದೆಷ್ಟು ನಿರಾಶೆಯಾಗಬಹುದೆಂದು ಹೇಳಲಾಗುವುದಿಲ್ಲ. ಉದಾಹರಣೆಯಾಗಿ ನೋಡಿದರೆ, ವಿ.ಮನೋಹರ್‍ ರಂಥಹ ಪ್ರತಿಭಾವಂತ ದೇಸಿ ಸಂಗೀತ ನಿರ್ದೇಶಕರು ಅತ್ಯಂತ ಶ್ರಮವಹಿಸಿ ಬರೆದು, ಸಂಗೀತ ಸಂಯೋಜಿಸಿಕೊಟ್ಟಿರುವಂತೆ ಕಾಣುವ “ಈ ಸಂಭಾಷಣೆ” ಎಂಬ ಇತ್ತೀಚಿನ ಚಿತ್ರವೊಂದರ ಹಾಡುಗಳನ್ನೂ, ಕಾಯ್ಕಿಣಿಯವರ ಕಾಣಿಕೆಗಳಲ್ಲಿ ಕೆಲವಾದ “ಹಾಗೇ ಸುಮ್ಮನೆ”, “ಕೃಷ್ಣ” ಮುಂತಾದ ಚಿತ್ರ ಹಾಡುಗಳನ್ನೂ ಚಿತ್ರೀಕರಿಸಿರುವ ಶೈಲಿಯನ್ನು ನೋಡಿದಾಗ ಸುಂದರವಾದ ಹಾಡುಗಳನ್ನು ಹೇಗೆ ಸದುಪಗೋಗಪಡಿಸಿಕೊಂಡಿಲ್ಲ ಎಂಬ ಸತ್ಯದ ಅರಿವಾಗುತ್ತದೆ. ಈ ಹಾಡುಗಳನ್ನು ಕೇಳಿದ ಖುಷಿಯಲ್ಲಿ ಕುತೂಹಲಗೊಂಡು ಕೆಲವು ದೃಶ್ಯಗಳನ್ನು “YouTube” ನಲ್ಲಿ ನೋಡೋಣ ಎಂದು ಪ್ರಯತ್ನಿಸಿದ ನಾನು, ಅದನ್ನು ಮುಂದುವರೆಸಲಾಗಲಿಲ್ಲ. ಇತೀಚಿನ ಸಿನಿಮಾಗಳಲ್ಲಿ ಸುಮಾರು ಶೇಕಡಾ ಎಪ್ಪತೈದರಷ್ಟು ಹಾಡುಗಳು ಇದೇ ರೀತಿ ವ್ಯರ್ಥವಾಗಿ ಹೋಗುತ್ತಿವೆ ಎಂದು ಕೇಳಿದರೆ ದಿಗ್ಭ್ರೆಮೆಯಾಗುತ್ತದೆ. ಮನಸ್ಸಿಗೆ ಘಾಸಿಯಾಗುತ್ತದೆ. ಸಂಪೂರ್ಣ ಅನಗತ್ಯ ಹಾಗೂ ಅಬ್ಬರದ ಹಾಡುಗಳು ಪ್ರಜ್ಞಾವಂತ ಪ್ರೇಕ್ಷಕ ವರ್ಗಕ್ಕೆ ಕಿರಿಕಿರಿ ಎಂದೆನಿಸಿ, ತಲೆನೋವು ತರಿಸುತ್ತಿವೆ. ಹಾಡು ಬಂತೆಂದರೆ “ಚುರು-ಮುರಿ”, “ಚಿಪ್ಸ್”, “Pop Corn”, “Pepsi” ಗಳತ್ತ ಪ್ರೇಕ್ಷಕರ ಮನಸ್ಸು ಜಾಗೃತವಾಗುತ್ತಿರುವುದು ಇದಕ್ಕೆ ಸಾಕ್ಷಿ.

ನಮ್ಮ ಕನ್ನಡ ಚಿತ್ರಗಳು ಒಂದು ಕಾಲದಲ್ಲಿ ತಮ್ಮ ಅತ್ಯತೃಷ್ಟ ಗುಣಮಟ್ಟ ಮಾತ್ರದಿಂದಲೇ, ಹೇಗೆ ಪರಭಾಷೆಯ ನಿರ್ದೇಶಕ, ಗಾಯಕ, ನಟರನ್ನು ಆಕರ್ಷಿಸಿತ್ತು ಎಂಬುದಕ್ಕೆ, ಮಣಿರತ್ನಂ, ಕೆ,ಬಾಲಚಂದರ್, ಮನ್ನಾಡೆ, ರಫಿ, ಕಿಶೋರ್ ಕುಮಾರ್, ಲತಾ ಮಂಗೇಶ್ಕರ್, ಆಶಾ ಭೋಂಸ್ಲೆ, ನಾಸಿರುದ್ದೀನ್ ಷಾ, ಅಮರೀಷ್ ಪುರಿ, ಸ್ಮಿತಾ ಪಾಟಿಲ್, ರೋಹಿಣಿ ಹಟ್ಟಂಗಡಿ … ಮುಂತಾದವರೆಲ್ಲಾ ಪ್ರತ್ಯಕ್ಷ ಉದಾಹರಣೆಯಾಗುತ್ತಾರೆ.

ಆದುದರಿಂದ ನಾವು ನಮ್ಮತನವನ್ನು ಗಟ್ಟಿಯಾಗಿರಿಸಿಕೊಂಡು, ಗಂಧದ ಗೂಡಿನಿಂದ ಸೌಗಂಧ ಸೂಸುವಂಥಹ ಚಿತ್ರಗಳನ್ನು ನೀಡಬೇಕಾಗಿದೆ ನಿರ್ದೇಶಕರೇ. ಹಾಡುಗಳನ್ನೂ ಕೂಡ.

೨೨-೦೮-೨೦೧೦

You may also like...

Leave a Reply