ಸಾಫ್ಟ್ ವೇರ್ ಎಂಜಿನೀಯರೊಬ್ಬನ ಹೃದಯ ಹಾರ್ಡ್ ಆದ ಕಥೆ


ಅಮೇರಿಕಾದ ಕ್ಯಾಲಿಫೊರ್ನಿಯಾದ ನಗರವೊಂದರಲ್ಲಿ ಗುಂಡಿನ ಸುರಿಮಳೆಗೈದು ಇಡೀ ನಗರವನ್ನೇ ತಲ್ಲಣಗೊಳಿಸಿದ ಈತ ಭಾರತೀಯನೆಂಬುದೇ ಕಹಿಯಾದ ಸತ್ಯ. ನಮ್ಮಲ್ಲಿ ಕಚ್ಚಾಟ, ಹೊಡೆದಾಟಗಳೆಲ್ಲಾ ಇದ್ದದ್ದೇ ಬಿಡಿ. ಕಿತ್ತಾಡಿ, ಬೈದಾಡಿ ಒಂದಾಗುವ ಅಥವಾ ಎಂದೂ ಒಂದಾಗದ ಸಾಕಷ್ಟು ಉದಾಹರಣೆಗಳಿವೆ. ಆಗದವರಿಗೆ ಶಾಪ ಹಾಕುವುದು ಅಥವಾ ಯಾವಾಗಲೂ ಕೇಡು ಬಯಸುವುದು, ಇನ್ನೂ ಸ್ವಲ್ಪ ಮುಂದುವರೆದು ಆತನ ಎಲ್ಲಾ ಕೆಲಸಗಳಲ್ಲೂ ಅಡ್ಡಗಾಲಾಕಿ ದಕ್ಕಿಸಿಕೊಡದಂತೆ ತಡೆಯುವುದು, ಇಲ್ಲವೇ ಆತನ ಜೊತೆ ತುಂಬಾ ಭಿನ್ನಾಭಿಪ್ರಾಯಗಳಿದ್ದರೆ, ಆತನನ್ನು ಶಾಶ್ವತವಾಗಿ ದೂರವಿಡುವುದು, ಇವು ಅತೀ ಕ್ರೂರವಾದ ಶಿಕ್ಷೆ ನಮ್ಮಲ್ಲಿ. ಅದನ್ನು ಬಿಟ್ಟು, ಆತನ ಪ್ರಾಣವನ್ನೇ ತೆಗೆಯುವುದೆಂದರೆ? ಭಾರತದಂಥಹ ದೇಶದಲ್ಲಿ ಅಂಥಹ ಘಟನೆಗಳು ಇಲ್ಲವೆಂದಲ್ಲ, ತೀರಾ ಅಪರೂಪ. ಪಾತಕ ಲೋಕದಲ್ಲಿ ನಿತ್ಯ ನಡೆಯುವ ಘಟನೆಗಳನ್ನೂ ಅಥವಾ “ಕ್ರೈಂ”ಗಳೆಂದು ಕರೆಯಬಹುದಾದ ಹೃದಯಹೀನರ ಕೃತ್ಯಗಳನ್ನು ನಾನಿಲ್ಲಿ ಸೇರಿಸಲಿಷ್ಟಪಡುವುದಿಲ್ಲ. ಏಕೆಂದರೆ, ಈಗ ಹೇಳ ಹೊರಟಿರುವ ಘಟನೆಯೂ ಅಂಥಹ ಗುಂಪಿಗೆ ಸೇರಿಸುವಂಥದ್ದಲ್ಲ. ನಮ್ಮ ಸಾಮಾಜಿಕ ಜನಜೀವನದ, ಸಾಮಾನ್ಯರ ಬದುಕನ್ನು ನೋಡಿದಾಗ ಅತೀ ವಿಕೃತ ಎನ್ನುವ ಘಟನೆಗಳು ತುಂಬಾ ವಿರಳ ನಮ್ಮ ದೇಶದಲ್ಲಿ. ಆದರೆ, ಇಲ್ಲಿ ಅಮೇರಿಕಾದಲ್ಲಿ?

ವಿಶ್ವದ ದೊಡ್ಡಣ್ಣ ಎಂದು ಹೇಳಿಕೊಳ್ಳುವ ಅಮೇರಿಕಾದಲ್ಲಿ ಏನೇ ನಡೆದರೂ ದೊಡ್ದದಾಗೇ ಇರುತ್ತವೆ ಎನ್ನುವುದಕ್ಕೆ ಅಷ್ಟೇ ಸರಿಯಾದ ಉದಾಹರಣೆ ಈ ಘಟನೆ. ಇಲ್ಲಿ ಈ ದೇಶದಲ್ಲಿ ಯಾರು ಬೇಕಾದರೂ “ಗನ್” ಲೈಸೆನ್ಸ್ ಪಡೆಯಬಹುದಾದ ಮುಕ್ತ ಅವಕಾಶವಿರುವುದರಿಂದ, ಕೆಲವರು ಅದನ್ನು ಅಷ್ಟೇ ಸದುಪಯೋಗಪಡಿಸಿಕೊಂಡು ತಮ್ಮ ಆತ್ಮ ರಕ್ಷಣೆಗಾಗಿ ಮಾತ್ರ ಬಳಸುತ್ತಾರೆ. ಪ್ರತಿಷ್ಠೆಗಾಗಿಯೋ ಅಥವಾ ಮೋಜಿಗಾಗಿಯೋ ಇಟ್ಟುಕೊಳ್ಳುವವರೂ ಕೆಲವರಿದ್ದಾರೆ. ಮತ್ತೆ ಕೆಲವರು ಅಗತ್ಯತೆಯ ಅರಿವೇ ಇಲ್ಲದೇ ಯಾರನ್ನೋ ನೋಡಿ ತಾವೂ ಲೈಸೆನ್ಸ್ ಪಡೆದುಕೊಳ್ಳುತ್ತಾರೆ. ಆದರೆ, ಇವರೆಲ್ಲರನ್ನೂ ಹೊರತಾಗಿ ಇನ್ನಲವರು ಯಾವುದೋ ದುರುದ್ದೇಶಕ್ಕೆಂದೇ ಪೂರ್ವ ಯೋಜನೆ ಮಾಡಿಟ್ಟುಕೊಂಡಿರುತ್ತಾರೆ ಹಾಗೂ ಅಂಥಹ ಅವಕಾಶಕ್ಕಾಗಿ ಕಾಯುತ್ತಾ, ಕಾರ್ಯಸಾಧನೆಗಾಗಿ ಹೊಂಚು ಹಾಕುತ್ತಿರುತ್ತಾರೆ.

ಈತ ಓದಿದವ, ವಿದೇಶದಲ್ಲಿದ್ದವ, ದುಡಿಯುತ್ತಿದ್ದವ. ಕಷ್ಟದ ದಿನಗಳನ್ನೆಲ್ಲ್ಲಾ ಕಳೆದು, ಭವಿಷ್ಯವನ್ನು ಸುಖವಾಗಿ ಕಳೆಯಬಹುದಾಗಿದ್ದವ. ಸಾವಿರ ಸಂಬಳದಲ್ಲಿ, ನೂರೋ, ಇನ್ನೂರೋ ಬಡ್ತಿ ಬಂದರೇ ವಾರೆವ್ಹಾ! ಅನ್ನುತ್ತಿದ್ದ ದಿನಗಳಲ್ಲಿ, ಲಕ್ಷಗಟ್ಟಲೆ ಸಂಬಳ, ವರ್ಷದಲ್ಲೇ ಕೋಟಿಗಳನ್ನು ನೋಡಿದ್ದವ, ಚಿಕ್ಕ ವಯಸ್ಸಿನಲ್ಲೇ ಎಲ್ಲವನ್ನೂ ಕಂಡಿದ್ದವ, ಅನುಭವಿಸಿದ್ದವ. ಇಷ್ಟೆಲ್ಲಾ ಇದ್ದ ಮೇಲೆ ಈತ ಹೇಗೆಲ್ಲಾ ಇರಬಹುದಾಗಿತ್ತು. ಆದರೆ ಏನು ಮಾಡಿದ ಎಂದು ತಿಳಿದರೆ ಮಾತ್ರ, ಈತ ಹೃದಯವೆಂಬ ಬಹು ಮುಖ್ಯವಾದ ಭಾಗವೇ ಇಲ್ಲದ ನರಭಕ್ಷಕನೆಂದೆನಿಸುತ್ತದೆ.

ಈತ ಕೇರಳದಿಂದ ಅಮೇರಿಕಾಗೆ ತುಂಬಾ ವರ್ಷಗಳ ಹಿಂದೆಯೇ ಬಂದು ನೆಲೆಸಿದ್ದ. ಸಾಕಷ್ಟು ಹಣವನ್ನೂ ಮಾಡಿಕೊಂಡಿದ್ದ. ಈ ಘಟನೆ ನಡೆದಾನಂತರ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ಫೋಟೋ ನೋಡಿದ ನಂತರವೇ ನನಗೂ ಆತನ ಕುಟುಂಬದ ಬಗ್ಗೆ ಸ್ವಲ್ಪ ತಿಳಿದದ್ದು. ಆತನಿಗೆ ಸುಂದರವಾದ ಹೆಂಡತಿ, ತುಂಬಾ ಮುದ್ದು-ಮುದ್ದಾದ ಆರು ಮತ್ತು ಮೂರು ವರ್ಷದ ಎರಡು ಮಕ್ಕಳು, ಇತ್ತೀಚೆಗಷ್ಟೇ ಖರೀದಿಸಿದ್ದ ಅದ್ಧೂರಿ ಮನೆ. ಒಬ್ಬ ವ್ಯಕ್ತಿಯ ಸಂತೋಷದ ಬದುಕಿಗೆ ಬೇಕಾಗಿದ್ದ ಎಲ್ಲಾ ಇದ್ದವು. ಇವೆಲ್ಲಾ ವಿಷಯಗಳ ಜೊತೆಗೇ, ಆತನ ಪರಿಚಯಸ್ಥರೊಬ್ಬರೂ ಹಾಗೂ ನಾನೂ ಒಂದೇ ಕಡೆ ಕೆಲಸ ಮಾಡುತ್ತಿದ್ದುದ್ದರಿಂದ, ಅವರಿಂದ ಆತನ ಬಗ್ಗೆ ಮತ್ತೊಂದಷ್ಟು ಮಾಹಿತಿ ನಂತರದ ದಿನಗಳಲ್ಲಿ ನನಗೆ ದೊರೆಯಿತು.

ಏಕೋ ಇತ್ತೀಚಿನ ದಿನಗಳಲ್ಲಿ ಆತನಿಗೂ ಹಾಗೂ ಆತನ ಮಾವನ ಮನೆಯವರಿಗೂ ಅಷ್ಟಕ್ಕಷ್ಟೇ ಆಗಿತ್ತು. ಅದು ಇನ್ನೂ ಮುಂದುವರೆದು ಪರಸ್ಪರ ಒಬ್ಬರನ್ನೊಬ್ಬರು ದ್ವೇಷಿಸುವಷ್ಟರವರೆಗೂ ಹೋಗಿ, ಸ್ವಲ್ಪ ದಿನಗಳ ನಂತರ ಎಲ್ಲಾ ತಿಳಿಯಾಗಿ, ಎರಡೂ ಕಡೆ ಸಮಾಧಾನದಿಂದಿದ್ದರು. ಇದೇ ವಿಷಯಗಳಿಗಾಗಿ ಆಗಾಗ್ಗೆ ಸಣ್ಣ-ಪುಟ್ಟ ಮಾತುಗಳು ಆತನ ಮತ್ತು ಆತನ ಹೆಂಡತಿಯ ಜೊತೆ ನಡೆಯುತ್ತಿದ್ದಿದ್ದರೂ, ಇಬ್ಬರೂ ಅವನ್ನೆಲ್ಲಾ ಮರೆತು ಮತ್ತೆ ಸರಿಹೋಗುತ್ತಿರುತ್ತಿದ್ದರು. ಮಕ್ಕಳ ಭವಿಷ್ಯಕ್ಕಾಗಿ ಜೊತೆಯಾಗೇ ದುಡಿಯುತ್ತಿದ್ದರು. ಇದೇ ಸಮಯಕ್ಕೆ ಸರಿಯಾಗಿ, ಆತನ ಹೆಂಡತಿಯ ತಮ್ಮನೂ ತಾನು ಕೆಲಸ ಮಾಡುತ್ತಿದ್ದ ಕಂಪನಿಯಿಂದ ಕೆಲವು ತಿಂಗಳುಗಳ ಕೆಲಸಕ್ಕಾಗಿ ಅಮೇರಿಕಾಗೆ ಬಂದ. ಆತನ ಹೆಂಡತಿ ಹಾಗೂ ಒಂದೂವರೆ ವರ್ಷದ ಮಗು ಕೂಡ ಅವನ ಜೊತೆಗೇ ಬಂದಿದ್ದರು. ಸ್ವಂತ ಜನ, ಅದೂ ದೂರದೂರಲ್ಲಿ ಹತ್ತಿರದಲ್ಲಿರುವಾಗ, ಪರಸ್ಪರ ಭೇಟಿ, ಊಟ, ಹೀಗೇ ಹಲವಾರು ಕಾರಣಗಳಿಗಾಗಿ ಎರಡೂ ಸಂಸಾರಗಳೂ ಆಗಾಗ್ಗೆ ಸೇರುತ್ತಿದ್ದವು. ಪ್ರತೀ ಭೇಟಿಯಲ್ಲೂ ಒಮ್ಮೊಮ್ಮೆ ತಮ್ಮ ಮನಸ್ಸಿನಲ್ಲೇ ಹೆಪ್ಪುಗಟ್ಟಿದ್ದ ಅಸಹನೆಯನ್ನು ಇಬ್ಬರೂ ಹೊರಹಾಕುತ್ತಿದ್ದರೂ, ತಾವೇ ತಾವಾಗಿ ಎಲ್ಲವನ್ನೂ ಮರೆತು ಇದ್ದಕ್ಕಿದ್ದಂತೇ ಸರಿಹೋಗುತ್ತಿದ್ದರು. ಊರಿನ ವಿಷ ಅಮೇರಿಕಾದವರೆಗೂ ಬಂದಿತ್ತು. ಇದೇ ಸಲಿಗೆಯಲ್ಲಿ ಎರಡೂ ಫ಼್ಯಾಮಿಲಿಗಳೂ ಸರಿಹೋಗಬಹುದೆಂಬುದು ಹೆಂಗಸರ ಆಶಯವಾಗಿತ್ತು.

ಇಂಥಹ ಸಮಯದಲ್ಲಿ ಈತ ಸ್ವಂತ ಮನೆಯೊಂದನ್ನು ಖರೀದಿಸಿದ. ಅದರ ಗೃಹಪ್ರವೇಶ ಕಾರ್ಯಕ್ರಮವನ್ನೂ ಅದ್ಧೂರಿಯಾಗಿ ಆಯೋಜಿಸಿದ. ಅಂದು ರಾತ್ರಿ ಊಟದ ವ್ಯವಸ್ಥೆಯೂ ಏರ್ಪಾಡಾಗಿತ್ತು. ಸ್ನೇಹಿತರೆಲ್ಲಾ ಬಂದು ಹೋಗಾಗಿತ್ತು. ಎಲ್ಲಾ ಮುಗಿಯುವಷ್ಟರಲ್ಲಿ ಸಮಯ ಸುಮಾರು ಹನ್ನೊಂದರ ಮೇಲಾಗಿದ್ದರಿಂದ ಹೆಂಡತಿಯ ತಮ್ಮ ಹಾಗೂ ಆತನ ಫ್ಯಾಮಿಲಿಯನ್ನು ಅಂದು ಅಲ್ಲೇ ಇದ್ದು ಬೆಳಿಗ್ಗೆ ಹೋದರಾಯಿತೆಂದೇಳಿ ಇರಿಸಿಕೊಂಡ. ಮಕ್ಕಳೆಲ್ಲಾ ಮಲಗಾಗಿತ್ತು. ಮಾರನೆಯ ದಿನ ಭಾನುವಾರವಾದ್ದರಿಂದ ನಿಧಾನವಾಗಿ ಮಲಗಿದರಾಯಿತೆಂದು ಎಲ್ಲರೂ ಹಾಡು ಕೇಳುತ್ತಾ, ಆಟವಾಡುತ್ತಾ ಕುಳಿತರು. ಪರಸ್ಪರ ತಮಾಷೆಯಾಗೇ ಪ್ರಾರಂಭವಾದ ಮಾತುಗಳು, ಸ್ವಲ್ಪ ಸಮಯ ಕಳೆದಂತೆ ಹಳೆಯ ಘಟನೆಗಳಲ್ಲಿ ಕೇಂದ್ರೀಕೃತವಾಗುತ್ತಾ ಹೋದವು. ಒಬ್ಬರ ಮೇಲೊಬ್ಬರು ದೋಷಾರೋಪ ಮಾಡಲು ಶುರುಮಾಡಿದರು. ವಿಷಯಗಳು ಗಂಭೀರವಾಗುತ್ತಾ ಹೋದವು. ಇಬ್ಬರ ಸಹನೆಯೂ ಮಿತಿಮೀರುತ್ತಾ ಹೋಯಿತು. ಒಂದು ಹಂತದಲ್ಲಿ ಕೈ-ಕೈ ಮುಂದಾದವು. ಪರಸ್ಪರ ಜಗ್ಗಾಡಿ, ಹೊಡೆದಾಡುವವರೆಗೂ ಹೋದಾಗ. ಇದಕ್ಕಾಗಿಯೇ ಪೂರ್ವಾಯೋಜಿಸಿ ತಂದಿರಿಸಿಕೊಂಡಿದ್ದ ತನ್ನ ಎರಡೂ “ಗನ್” ಗಳನ್ನು ಹೊರತೆಗೆದ. ವಿಷಯ ಎಷ್ಟೇ ಸಣ್ಣದಾದರೂ, ವಿವೇಚನೆಯೆಂಬುದೊಂದು ಕೆಲಸ ಮಾಡದಿದ್ದಾಗ ಮನುಷ್ಯ ಏನಾಗಬಹುದೋ, ಅದನ್ನೂ ಮೀರಿದ ಕಠೋರ ಹೃದಯಿಯಾದ. ಆತನನ್ನು ತಡೆಯಲು ಹೆಂಡತಿ ಎಷ್ಟೇ ಪ್ರಯತ್ನಿಸಿ ಬೇಡಿಕೊಂಡರೂ, ಆಕೆಯ ತಮ್ಮನ ಎದೆಗೆ ನೇರವಾಗಿ ಗುಂಡಾರಿಸಿಯೇಬಿಟ್ಟ. ಆತ ಹಾಗೇ ನೆಲಕ್ಕುರುಳಿದ. ಇವನು ಅಷ್ಟಕ್ಕೇ ಸುಮ್ಮನಾಗಲಿಲ್ಲ. ಮನಸ್ಸಿನಲ್ಲಿ ಮಾಡಿಕೊಂಡಿದ್ದ ನಿರ್ಧಾರವನ್ನು ಇಂದು ಪೂರ್ಣಗೊಳಿಸಿಬಿಡಲೇಬೇಕೆಂದು, ಎಲ್ಲರ ದೇಹಕ್ಕೂ ಗುಂಡಿನ ಸುರಿಮಳೆಗೈದು ಕ್ಷಣದಲ್ಲಿ ಮನೆಯನ್ನೇ ರಕ್ತದ ಮಡುವಾಗಿಸಿದ. ಘಳಿಗೆ ಹಿಂದೆ ಆನಂದದಿಂದಾಡುತ್ತಿದ್ದ ಜೀವಗಳೆಲ್ಲಾ ಈತನ ವಿಕೃತತನದಿಂದ ಹೆಣವಾಗುತ್ತಾ ಹೋದವು. ಹಸುಳೆಗಳೆದೆಯಲ್ಲಿ ನಾಟಿದ ಗುಂಡುಗಳು ಅವರ ದೇಹಗಳನ್ನು ಚಿಲ್ಲಾಪಿಲ್ಲಿ ಮಾಡಿದ್ದವು. ರೋಧಿಸಲೂ ಶಕ್ತಿಯಿಲ್ಲದೆ ಕಂದಮ್ಮಗಳೆಲ್ಲಾ ಒಂದೊಂದಾಗಿ ಹಾಗೇ ಸಾಯುತ್ತಿರುವುದನ್ನು ನೋಡು-ನೋಡುತ್ತಲೇ ತನ್ನ ತಲೆಯೊಳಗೊಮ್ಮೆ ತಾನೇ ಗುಂಡೊಂದನ್ನು ಸಿಡಿಸಿಕೊಂಡು ಕ್ಷಣದಲ್ಲೇ ಆತನೂ ಹೆಣವಾಗಿಹೋದ.

ಒಂದೂವರೆ, ಮೂರು ಹಾಗೂ ಆರು ವರ್ಷದಸುಳೆಗಳೆದೆಗೆ ತನ್ನ ಗನ್ನನ್ನು ಗುರಿಯಾಗಿಸಿ ನಿಂತು, ಗುಂಡಿ ಹೊತ್ತಿ, ಕೋಮಲಾತೀಕೋಮಲವಾದ ದೇಹದೊಳಕ್ಕೆ ಗುಂಡು ಹಾರಿಸಿದ ಆ ಭೀಕರವಾದ ಕ್ಷಣವನ್ನೊಮ್ಮೆ ನೆನಸಿಕೊಂಡು ನನಗೆ ಹೃದಯದ ಬಡಿತವೇ ನಿಂತ ಹಾಗಾಯಿತು. ಮನಸ್ಸು ಭಾರವಾಯಿತು. ಕಣ್ಣುಗಳು ತುಂಬಿ ಬಂದವು. ಹಾಗೇ ಸೋಫಾದ ಮೇಲೆ ಕೂತು ಆಲೋಚನೆಗಳ ಆವೇಗವನ್ನು ತಡೆಯಲಾಗದೇ ತಲೆಗೆ ಕೈಕೊಡುತ್ತಿದ್ದಂತೆ, ನನ್ನ ಮೂರುವರೆ ವರ್ಷದ ಮಗ “ಅಪ್ಪಾ!” ಅಣ್ಣ ಟಾಯ್ಸ್ ಕೊಡ್ತಾ ಇಲ್ಲಾ” ಎಂದು ಹತ್ತಿರ ಬಂದ. ನಾನವನ ಮುದ್ದು ಮುಖವನ್ನೊಮ್ಮೆ ನೋಡಿದೆ. ಮೃದುವಾದ ಆತನ ದೇಹದಲ್ಲೆಲ್ಲಾ ಮುತ್ತಿಟ್ಟು ಮುದ್ದಾಡುವ ನನ್ನ ಕೈಗಳಿಂದ ಅವನನ್ನು ಅಪ್ಪಿಕೊಳ್ಳದೆ ಸುಮ್ಮನಿರಲಾಗಲಿಲ್ಲ.

೦೨/೦೨/೨೦೧೦

You may also like...

Leave a Reply