ಸಿನಿಬಗ್ಗೆ


ಒಡನಾಡಿಗಳ ಒಂದಷ್ಟು ಅಭಿಪ್ರಾಯಗಳು


“ಸಿದ್ದೇಗೌಡ ನಿಡಗಟ್ಟರು ಸಣ್ಣ ಸಣ್ಣ ಮಾತುಗಳಲ್ಲಿ ಸುಂದರ ಭಾವಗಳನ್ನು ಚಿತ್ರಿಸುತ್ತಾರೆ”.
 -ಪ್ರೇಮಕವಿ ಡಾ. ಕೆ.ಎಸ್.ನರಸಿಂಹಸ್ವಾಮಿ (ತುಷಾರದಲ್ಲಿ)

ಪ್ರಿಯ ಸಿದ್ದೇಗೌಡರೇ,
ನಿಮ್ಮ ಬಗ್ಗೆ ಈ ಪುಸ್ತಕದಲ್ಲಿ ಎರಡು ಸಾಲುಗಳನ್ನು ಬರೆದರೆ ಸುಳ್ಳಾಗುತ್ತದೆ. ನಿಮ್ಮ ವಿಶ್ವಾಸಕ್ಕೆ ಚಿರಋಣಿ. ನಿಮ್ಮಂಥಹ ಕನ್ನಡದ ಬಗ್ಗೆ ಆಸಕ್ತಿ ಇರುವವರ ಪರಿಚಯವಾದ ನಂತರವೇ, ಈ ಕಾಲೇಜಿನಲ್ಲಿ ಕನ್ನಡದ ಬಗ್ಗೆ ಮಾತನಾಡಲು, ಬರೆಯಲು ಮನಸ್ಸಾದುದು. ಆದ್ದರಿಂದ ಪತ್ರದಲ್ಲಿ ನಿಮ್ಮನ್ನು ಸದಾ ಸಂಪರ್ಕದಲ್ಲಿಟ್ಟುಕೊಂಡಿರುತ್ತೇನೆ.
ಸಿ.ವೈ.ಲಕ್ಷ್ಮೀಕಾಂತ, ಬೆಂಗಳೂರು

ಸಿದ್ದೇಗೌಡರೇ,
ನಿಮ್ಮ ಬಗ್ಗೆ ಅನಿಸಿಕೆಗಳನ್ನು ವ್ಯಕ್ತಪಡಿಸುವಷ್ಟು ಪ್ರಬುದ್ಧಳು ನಾನಲ್ಲ. ಆದರೂ, ವಿಚಾರವಾಹಿನಿಗೆ ಕಳಸಪ್ರಾಯವಾಗಿದ್ದ ನಿಮ್ಮ ಲೇಖನಗಳಿಂದ ಅದರಲ್ಲೂ ಆಕರ್ಷಕವಾಗಿದ್ದ ನಿಮ್ಮ ಕೈಬರಹದಿಂದ ಆಕರ್ಷಿತಳಾದ ನಾನು ಅವುಗಳ ಬಗ್ಗೆ ಕೆಲವು ಮಾತುಗಳನ್ನು ಹೇಳಲು ಇಚ್ಛಿಸುತ್ತೇನೆ. ಮೊದಲ ಬಾರಿ ವಿಚಾರವಾಹಿನಿಯನ್ನು ಓದಿದಾಗ ತುಂಬಾ ಮೆಚ್ಚುಗೆಯಾಯ್ತು. ಕನ್ನಡಿಗರೂ ಆಂಗ್ಲಭಾಷೆಯಲ್ಲಿ ವಟಗುಡುವ ಈ ಕಾಲೇಜಿನಲ್ಲಿ ಕನ್ನಡದ ಬರಹಗಳಿಗಾಗಿಯೇ ಮೀಸಲಾಗಿದ್ದ ಈ ಪತ್ರಿಕೆ ನಿಜಕ್ಕೂ ಮನ ಸೆಳೆಯಿತು. ಆಗ ಅದರ ಸೃಷ್ಟಿಕರ್ತ, ಸಂಪಾದಕ ಮತ್ತು ವಿಚಾರವಾಹಿನಿಯ ಪರ್ಯಾಯ ಪದದಂತಿದ್ದ ನಿಮ್ಮ ಬಗ್ಗೆ ತಿಳಿಯಿತು. ಅದರಲ್ಲೂ, ನೀವು ಹಳ್ಳಿಗಾಡಿನ ಪ್ರತಿಭೆ ಎಂದು ತಿಳಿದು ಮತ್ತಷ್ಟು ಬೆರಗಾದೆ. ನಂತರ ಕನ್ನಡ ಸಂಘದ ಅಧ್ಯಕ್ಷರಾದ ನಿಮ್ಮ ಪರಿಚಯ ಬೆಳೆಯಿತು. ಆದರೆ, ಒಂದು ಒಳ್ಳೆ ಉದ್ದೇಶದಿಂದ ಸ್ಥಾಪಿತವಾದ ಈ ಸಂಘ ನಿಮ್ಮ ನಂತರ ಕೇವಲ ನಾಮಕಾವಸ್ಥೆಯಾಗಿ ಉಳಿದಿದ್ದು ಮಾತ್ರ ತುಂಬಾ ಬೇಸರದ ಸಂಗತಿ.

ನೀವು ಬರೆಯುತ್ತಿದ್ದ ಚುಟುಕುಗಳಿಗಿಂತ, ಸಂಪಾದಕೀಯ ಅಂಕಣದ ನಿಮ್ಮ ಬರಹಗಳು ನಮ್ಮೆಲ್ಲರ ಗಮನ ಸೆಳೆಯುತ್ತಿದ್ದವು. ದೈರ್ಯದಿಂದ ಆಡಳಿತ ವರ್ಗದ ಹುಳುಕುಗಳನ್ನು ಎತ್ತಿ ತೋರಿಸುತ್ತಿದ್ದ ನಿಮ್ಮ ಬರಹಗಳನ್ನು ಓದಿ ನನ್ನ ಸ್ನೇಹಿತೆಯರೆಲ್ಲಾ “ಈತ ಖಂಡಿತಾ ಈ ಕಾಲೇಜಿನಿಂದ ಓದು ಮುಗಿಸಿ ಹೋಗಲು ಆಗೋಲ್ಲ” ಎಂದು ಮಾತನಾಡಿಕೊಳುತ್ತಿದ್ದರು. ನನಗೂ ಕೆಲವೊಮ್ಮೆ ಹಾಗೇ ಅನ್ನಿಸುತ್ತಿತ್ತು. ಆದರೆ, ನೀವು ಅವೆಲ್ಲವನ್ನೂ ಎದುರಿಸಿ ಬೆಳೆದ ನಿಮ್ಮ ದೈರ್ಯ ನಿಜಕ್ಕೂ ಶ್ಲಾಘನೀಯ. ಮುಂದೆ ಕೂಡ ನೀವು ಮಾಡಲಿಚ್ಛಿಸಿರುವ ಕನ್ನಡದ ಸೇವೆಗ ನನ್ನ ಅಳಿಲು ಸೇವೆ ಸಲ್ಲಿಸುವ ಆಸೆ. ಆ ರೀತಿಯಲ್ಲಾದರೂ ನನ್ನಲ್ಲಿರುವ ಕನ್ನಡಭಿಮಾನವನ್ನು ಕೃತಿಗಿಳಿಸುವ ಅವಕಾಶ ದೊರೆತರೆ ಸಾಕು. ಇದಕ್ಕೆ ನಿಮ್ಮ ಸಹಕಾರ, ಮಾರ್ಗದರ್ಶನಗಳನ್ನು ನಿರೀಕ್ಷಿಸಬಹುದಲ್ಲವೇ?

ನಿಮ್ಮ ಭವಿಷ್ಯದಲ್ಲಿ ಕೂಡ ಕನ್ನಡಕ್ಕಾಗಿ ನಿಮ್ಮ ಸೇವೆ ಸದಾ ಮುಡುಪಾಗಿರಲಿ, ಬಹುಮುಖ ಪ್ರತಿಭೆಯ ನಿಮ್ಮ ವ್ಯಕ್ತಿತ್ವ ಮತ್ತಷ್ಟು ವೃದ್ಧಿಸಲಿ ಎಂಬುದೇ ನನ್ನ ತುಂಬು ಹೃದಯದ ಹಾರೈಕೆಗಳು.

ಮತ್ತೊಂದು ವಿಚಾರ, ಪ್ರತಿಬಾರಿ ವಿಚಾರವಾಹಿನಿಯಲ್ಲಿ ನಿಮ್ಮ ಛಾಯಚಿತ್ರ ಹಾಕುವ ಅವಕಾಶ ಇತ್ತೇ? ಈ ಪ್ರಶ್ನೆಯನ್ನು ಹಲವಾರು ಬಾರಿ ನಿಮ್ಮಲ್ಲಿ ಕೇಳಬೇಕೆಂದುಕೊಂಡರೂ ಕೇಳಲಾಗಲಿಲ್ಲ ಮತ್ತು ನಿಮ್ಮ ಬರಹಗಳೆಲ್ಲವೂ ಹಸಿರು ಶಾಯಿಯ ಅಕ್ಷರಗಳಲ್ಲಿರುತ್ತಿದ್ದರ ಗುಟ್ಟೇನು? ಮತ್ತೊಮ್ಮೆ ನಿಮ್ಮ ಆಕರ್ಷಕವಾದ ಕೈಬರಹವನ್ನು ಅಭಿನಂದಿಸುತ್ತಾ.
ಸುನೀತಾ. ಆರ್, ಸಾಫ಼್ಟ್ ವೇರ್ ಇಂಜಿನೀಯರ್ (ಅಮೇರಿಕಾ)

ಸಿದ್ದುಗೆ,
ನನ್ನ-ನಿಮ್ಮ ಸ್ನೇಹದ ಬಗ್ಗೆ ಎಲ್ಲಿಂದ ಶುರು ಮಾಡುವುದು? ಆಕಸ್ಮಿಕವೋ, ಅನಿವಾರ್ಯವೋ ಆಗಿ ನಾನು ನನ್ನೆಲ್ಲಾ ದುಗುಡ, ಹತಾಶೆ, ನೋವುಗಳ ನಡುವೆಯೂ ನಿಮ್ಮೊಂದಿಗೆ ಬೆರೆತೆ. ಈ ಕಾಲೇಜಿನ ದುಷ್ಟ ಜಂತುಗಳ ಬಗ್ಗೆ ನೀವು ತೀವ್ರ ವಿಷಾದದಿಂದ, ನೋವಿನಿಂದ ಹೇಳುತ್ತಿದ್ದಾಗ ಎಲ್ಲವನ್ನೂ ಬೆರಗಿನಿಂದಲೇ ಕೇಳುತ್ತಾ ಕೂತೆ. ಈ ಕಂತ್ರಿಗಳ ಅರಿವಿದ್ದೂ “ನೀವು ಕವಿಗಳೆಲ್ಲಾ ಹೀಗೆಯೇ ಯಾಕೆ ಸಾರ್?” ಅಂದೂ ಚುಡಾಯಿಸಿದೆ. “ವಿಚಾರವಾಹಿನಿ”ಯ ಸಂಪಾದಕತ್ವ ನನ್ನ ಹೆಗಲಿಗೆ ಬಿದ್ದಾಗ ನೀವು ನೀಡಿದ ಪ್ರೋತ್ಸಾಹ, ಅಭಿಮಾನದ ಮಾತುಗಳನ್ನು ಮರೆಯುವುದಾದರೂ ಹೇಗೆ?
ನಮ್ಮ ಸ್ನೇಹದ ಬಗ್ಗೆ:
“ಪದಗಳಲ್ಲಿ ಹೆಣೆಯಲಾಗದ ಕನಸು
ಹೆಣೆದ ಹಾಡಿಗೆ ಹೊಂದದ ಪದ
ಪದ ಪುಂಜಗಳಿಗೆ ಸಾಟಿಯಾಗದ ರಾಗಗಳು
ಒಮ್ಮೆ ಬಚ್ಚಿಡಬೇಕು, ಒಮ್ಮೆ ಬಿಚ್ಚಿಡಬೇಕು
ಅನ್ನಿಸುವ ಮಧುರ ಭಾವನೆಗಳು….”

ಇವುಗಳಿಗೇನಾದರೂ ಕೊನೆ-ಮೊದಲೆಂಬುದಿದೆಯೋ?
ಎ.ಆರ್. ಮಣಿಕಾಂತ್, ಪತ್ರಕರ್ತ ಕನ್ನಡ ಪ್ರಭ ಬೆಂಗಳೂರು

ನನ್ನೊಲವಿನ ಸಿದ್ದೇಗೌಡರಿಗೆ,
ಗೆಳೆತನವಲ್ಲ ನಮ್ಮ ಸಂಬಂಧ. ಇದು ನನ್ನ ನಿಮ್ಮ ನಡುವೆ ಆ ದೇವರು ಬೆಸೆದಿರುವ ಅನುಬಂಧ. ನನ್ನೂರಿನವರಾಗಿ ನೀವು ಮಾಡಿರುವ ಸಾಧನೆಗಳು ಮೆಚ್ಚುವಂಥಹವು. ನೀವು ನಮ್ಮೂರಿನ ಹೆಸರನ್ನು ಬೆಳಗಿ, ಕೀರ್ತಿ ತಂದಿರುವುರಿ. ಅದಕ್ಕಾಗಿ ನನ್ನ ಅಭಿನಂಧನೆಗಳು. ನೀವು ಸ್ನೇಹಶೀಲತೆಯಿಂದ ನಮ್ಮ ಕಾಲೇಜಿನಲ್ಲಿ ಒಳ್ಳೆ ಹೆಸರು ಹಾಗೂ ಗೆಳೆಯರನ್ನು ಪಡೆದು ಎಲ್ಲರಿಗೂ ಮೆಚ್ಚಿನವರಾಗಿದ್ದು, ನಿಮ್ಮ ವಿದ್ಯಾಭ್ಯಾವನ್ನೂ ಉತ್ತಮ ಶ್ರೇಣಿಯಲ್ಲಿ ಮುಗಿಸಿ ನಿಮ್ಮ ಹೆಸರಿನ ಖ್ಯಾತಿಯನ್ನು ಇಲ್ಲಿ ಉಳಿಸಿ ಹೋಗುತ್ತಿರುವಿರಿ. ಅದನ್ನು ನಾನು ಕಾಯ್ದುಕೊಂಡು, ನಿಮಗೆ, ನಮ್ಮೂರಿಗೆ ಮತ್ತಷ್ಟು ಒಳ್ಳೆ ಹೆಸರನ್ನು ತರುತ್ತೇನೆಂದು ಭರವಸೆಗಳನ್ನು ಕೊಡುತ್ತೇನೆ.

“ನನ್ನ ಮುತ್ತುಗಳು”

“ಓ ನನ್ನೂರಿನ ಚಿನ್ನ
ಯಾರಿಗೆ ಹೋಲಿಸಲಿ ನಿನ್ನ
ಹೋಲಿಸಲಾರೆ ಬೇರಯವರಿಗೆ ನಿನ್ನ
ಬೆಳಗಿತಿರು ಎಂದೆಂದೂ ಭುವನೇಶ್ವರಿಯ
ಮುಕುಟದ ಮಣಿಯಾಗಿ, ರನ್ನ
ಬರೆಯುವಾಸೆ ನಿನಗಾಗಿ ನೂರಾರು ಸಾಲುಗಳು
ಸಾಲದೀ ಸಾಲುಗಳು ಅಭಿನಂದಿಸಲು ನಿನ್ನೆಲ್ಲಾ ಸಾಧನೆಗಳು
ಜನ ಮೆಚ್ಚುವಂತಾಗಲಿ ನೀ ಮಾಡುವ ಕಾರ್ಯಗಳು
ಆರೈಸುವೆ ನನಸಾಗಲೆಂದು ನಿನ್ನೆಲ್ಲಾ ಕನಸುಗಳು
ಈ ಸಾಲುಗಳು ನಿನಗಾಗಿ ನಾ ನೀಡುವ ಸಿಹಿಮುತ್ತುಗಳು”.
ಆರ್. ನಾಗಶೇಖರ್, ಚಲನಚಿತ್ರ ನಟ ಹಾಗು ನಿರ್ದೇಶಕ, ಬೆಂಗಳೂರು

ಪ್ರಿಯ ಗೌಡರೇ,
ಮಂಡ್ಯ ಕಾಲೇಜಿಗೆ ಬಂದಾಗ “ವಿಚಾರವಾಹಿನಿ” ಕಂಡೆ. ಪರವಾಗಿಲ್ಲ! ಚಿಂತಿಸುವ ಒಂದಿಷ್ಟು ಹುಡುಗರಿದ್ದಾರೆ ಎಂದು ಖುಷಿಯಾಯಿತು. ಜೊತೆಗೆ ಇವರ ಜೊತೆ ಸೇರಿ ಒಂದು ವೇದಿಕೆ, ಸಾಹಿತ್ಯ ಚಟುವಟಿಕೆ, ಚರ್ಚೆ ನಡೆಸಲಾಗಲಿಲ್ಲವಲ್ಲಾ ಎಂಬ ವಿಷಾದ ಉಳಿದು ಬಿಟ್ಟಿದೆ. ಗೌಡರ ಬಗ್ಗೆ ನಿನಗೇನನ್ನಿಸುತ್ತದೆ? ಬಹುಶಃ ಉತ್ತರಿಸುವುದು ಕಷ್ಟ. ಕೊನೆಗೆ ಅನ್ನಿಸಿದ್ದು ಇಷ್ಟು. “ಅಮೂರ್ತ ವಿಚಾರಗಳ ಗೊಂದಲದಲ್ಲಿರುವ ಈ ಹುಡುಗನಿಗೆ ನೆಲೆ, ಮಾರ್ಗದರ್ಶನ, ಪ್ರೋತ್ಸಾಹ ಸಿಕ್ಕದ್ದರೆ, ಈಗ ಸಿಕ್ಕರೂ ಪರಿಪೂರ್ಣತೆಯ, ಪಕ್ವಗೊಂಡ ಹೊಸ ಮನಸ್ಸೊಂದು ಸೃಷ್ಟಿಗೊಳ್ಳುತ್ತಿತ್ತು”. ಇವತ್ತು ಸೃಷ್ಟಿಶೀಲ ಬರಹಗಾರನೊಬ್ಬ ವಾಸ್ತವವನ್ನು ತುಂಬಾ ಎಚ್ಚರಿಕೆಯಿಂದ ಕಾಣಬೇಕಾಗುತ್ತದೆ. ಹುಡುಗಿಯ ಅಂಗಾಂಗಗಳ, ಪ್ರೀತಿಯ ಸೆಲೆಯನ್ನು ವರ್ಣಿಸುತ್ತಲೇ, ವಾಸ್ತವದ ಕಠೋರಗಳನ್ನು ದಾಖಲಿಸಬೇಕು. “ಪುರೋಹಿತಶಾಯಿ ವಿರೋಧಿಯಾಗದೆ, ಹೊಸ ಬರಹಗಾರನೊಬ್ಬ ಹುಟ್ಟಲಾರ” ಎಂವ ತೇಜಸ್ವಿಯ ಮಾತುಗಳನ್ನು ಗಮನಿಸಿ.

ನಿಮ್ಮ ಬಗ್ಗೆ ಬೇಸರಕ್ಕೆ ಕಾರಣ “ವಿಚಾರವಾಹಿನಿ”ಯಲ್ಲಿ ಫೋಟೋ ಹಾಕಿದ್ದು. ಸೃಷ್ಟಿಶೀಲ ಬರಹಗಾರ ಎಲ್ಲಾ ಪ್ರಚಾರ, ವೈಯುಕ್ತಿಕ ಆಸೆಗಳನ್ನು ಮೀರಿ ನಿಲ್ಲಬೇಕು. ಈ ಬಗ್ಗೆ ನಿಮಗೆ ನೋವಾಗಿದ್ದರೆ ಕ್ಷಮಿಸಿ. ಹಳ್ಳಿಗಾಡಿನ ಮೂಲದ ನಮ್ಮಂಥ ಹುಡುಗರ ಮೇಲಿನ ಜವಾಬ್ದಾರಿ ಗುರುತರವಾದದ್ದು. ನಮ್ಮ ಹಳ್ಳಿಗಾಡಿನ ದಿವಾಳಿತನ, ಬೌದ್ಧಿಕವಾಗಿ ದಿವಾಳಿ ಎದ್ದಿರುವ ದೇಶವನ್ನು ನಮ್ಮಂಥ ಯುವಜನರು ರಕ್ಷಿಸಬೇಕು.

ನೀವು ಒಂದಿಷ್ಟು ಪ್ರಯತ್ನಿಸಿದರೆ ಅದು ಖಂಡಿತಾ ನಿಮ್ಮಿಂದಾಗುತ್ತದೆ
ಜಿ. ಕೃಷ್ಣಪ್ರಸಾದ್, ಛಾಯಗ್ರಾಹಕ ಬೆಂಗಳೂರು

ಪ್ರಿಯ ಮಿತ್ರಾ,
ನಾನು ಮಿತ್ರಾ ಅನ್ನೋ ಪದಾನಾ ಒಂದಷ್ಟು ಸ್ವತಂತ್ರವಾಗೇ ಬಳಸಿದ್ದೀನಿ. ನನಗೆ ನೀನು ಪರಿಚಯವಾಗೋದಕ್ಕೂ ಮೊದಲೇ ನಿನ್ನ ಬಗ್ಗೆ ಕೇಳಿದ್ದೆ. ನಿನ್ನ ಜೊತೆ ಮೊದಲಬಾರಿಗೆ ಮಾತನಾಡಿದಾಗ ಕೂಡ ನನಗೆ ಪ್ರಥಮ ಭೇಟಿಯಲ್ಲಿ ಕಾಣಬಹುದಾದ ಗೊಂದಲ, ಅನಿಶ್ಚಿತತೆ ಉಂಟಾಗಲಿಲ್ಲ. ಒಬ್ಬ ಆತ್ಮೀಯನ ಜೊತೆ ಮಾತನಾಡ್ತಾ ಇರೋ ಹಾಗೆ ಅನ್ನಿಸ್ತು. ಮಿತ್ರಾ, ಅಲ್ಲೊಂದು ಊರು. ಒಂದಷ್ಟು ಜನ. ವರ್ಷಕ್ಕೆ ಒಂದೋ, ಎರಡೋ ನಾಟಕಗಳು. ಒಂದಿಷ್ಟು ಜಗಳ. ದ್ವೇಷ, ಕೋರ್ಟು, ಕಛೇರಿ. ಇಡೀ ಮಂಡ್ಯ ಜಿಲ್ಲೆಯ, ಅಷ್ಟೇ ಯಾಕೆ? ನಮ್ಮ ದೇಶದ ಬವಣೆ ಕಣೋ ಇದು. ಜನ ತಾವೆಲ್ಲಾ ಸಂತೋಷವಾಗಿ, ನೆಮ್ಮದಿಯಾಗಿ ಇದ್ದೀವಿ ಅಂದ್ಕೋತಾನೆ ಒಂಥರಾ ಗುಲಾಮಗಿರಿಗೆ, ಊಳಿಗಮಾನ್ಯ ಪದ್ಧತಿಗೆ ಹೊಂದಿಕೊಂಡುಬಿಟ್ಟಿದ್ದಾರೆ. ಇಲ್ಲಿ ಈ ಮಣ್ಣಲ್ಲಿ, ಈ ಜನರ ನಡುವೆ ಹುಟ್ಟಿರೋ ನಮಗೆ ಒಂದಿಷ್ಟು ಜವಾಬ್ದಾರಿ ಇದೆ ಅನ್ನೋದಿಲ್ವಾ?. ನೋಡಿಲ್ಲಿ, ನಮ್ಮ ಆಚೆ, ಪಕ್ಕದ ಮನೆ ಹೈದ, ಅವನು ಕಲಾ ವಿಭಾಗ ತಗೊಂಡಿದ್ದ ಪಿ.ಯು.ಸಿನಲ್ಲಿ. ಅವನು ಇಂಗ್ಲೀಷಿನಲ್ಲಿ ಫೇಲು ಅದ್ರೆ ಒಟ್ಟು ೬೬% ತೆಗೆದಿದ್ದಾನೆ.

ನಾನು ಇಷ್ಟೊಂದುಯಾಕೆ ಹೇಳ್ದೆ ಅಂತಾ ನಿನಗೆ ಈಗ ಅರ್ಥವಾಗಿರಬೇಕು. ನಮ್ಮ ಜನಕ್ಕೆ ನಿನ್ನಂಥವರ ಅವಶ್ಯಕತೆ ಇದೆ. ಮುಂದೆ ಯಾವತ್ತೂ ನೀನು ನಮ್ಮ ಜನರ, ಹೈಕಳ ಸಮಸ್ಯೆಗಳನ್ನ ಗಂಭೀರವಾಗಿ ಪರಿಗಣಿಸಿ ನಮ್ಮ ಜನಕ್ಕೆ, ಹುಡುಗರಿಗೆ ಇರೋ ಕೀಳಿರಿಮೆ, ತರಲೆತನ, ತಿರುಕತನ ಇವುಗಳನ್ನ ಹೋಗಲಾಡಿಸೋ ದಿಕ್ಕಿನತ್ತ ಒಂದಿಷ್ಟು ಪ್ರಯತ್ನ ನಡಿಸ್ತೀ ಅಂತಾ.
ಹೆಚ್. ಮೋಹನ್, ಸಾಫ಼್ಟ್ ವೇರ್ ಇಂಜಿನೀಯರ್ (ಅಮೇರಿಕಾ)

ಲೋ ಸಿದ್ದಾ,
ನೀನು ನನ್ನ ಬಹಳಷ್ಟು ಸ್ನೇಹಿತರಂಥಲ್ಲ.
ನನ್ನ ಅಂತರಂಗದ ಸಖ.
ಒಡನಿದ್ದವನು,
ಒಡನೆ ಹಾಡಿದವನು,
ಒಡನಾಡಿದವನು.
ನನ್ನ ವಿಲಕ್ಷಣ ಮೂಡಿಗೆ ಇಡಿಯಾಗಿ ಒಡ್ಡಿಕೊಂಡವನು.
ನನ್ನಿಂದ ಕಾಡಿಸಿಕೊಂಡವನು.
ಓದು ಓದೆಂದು ಎಡೆಬಿಡದೆ ಕಾಡಿದವನು ….
ಕವಿಯಲ್ಲವೇ ನೀನು? ಭಾಷೆ ನನಗೆ ಗೊತ್ತಿಲ್ಲದೆಯೇ ಕಾವ್ಯಮಯವಾಗುತ್ತಿದೆ. ನೀ ನನಗೆ ಉಣಿಸಿದ ಮಿಗಿಲಾದ ಸ್ನೇಹಕ್ಕೆ ವಂದನೆಗಳು.
ದಿವಾಕರ್ ಹೆಚ್. ಹೊಂಬಾಳೆ, ಮಂಡ್ಯ

ಡಿಯರ್ ಸಿದ್ದು,
ನಿಮ್ಮ “ವಿಚಾರವಾಹಿನಿ” ಯಿಂದಲೇ ನನಗೆ ಮೊದಲು ನಿಮ್ಮ ಪರಿಚಯವಾದದ್ದು. ಈಗ ನನ್ನ ಕೆಲವೇ ಮರೆಯಲಾಗದ ಫ್ರೇಂಡ್ಸ್ ಗಳಲ್ಲಿ ಒಬ್ಬರಾಗಿದ್ದೀರಿ. ಸಂಪೂರ್ಣ ಕನ್ನಡದ್ದೇ ಒಂದು ಸುಂದರ ಪತ್ರಿಕೆ. ವಾಹ್! ಇದು ನಿಜವಾಗಿ ನಿಮ್ಮ ಒಂದು ಅಪೂರ್ವ ಸಾಧನೆ. ನಿಮ್ಮ ಸಂಪಾದಕೀಯ, ಹನಿಗವನಗಳು, ನಗೆಹನಿಗಳು, ಟಿಪ್ಪಣಿಗಳು ಎಲ್ಲವೂ ಚೆನ್ನಾಗಿರುತ್ತಿದ್ದವು. ಚಿತ್ರ ಮತ್ತು ಫೋಟೋಗಳಂತೂ ಮನಸೆಳೆಯುವಂತಿದ್ದವು. ನಾವೆಲ್ಲಾ “ಅಯ್ಯೋ! ಏನು ಮಾಡೋಕೂ ಸಮಯವೇ ಸಾಲೋಲ್ಲ” ಅನ್ನುತ್ತಿರುವಾಗ, ನೀವು ಅಷ್ಟೊಂದು ತಾಳ್ಮೆಯಿಂದ, ನೀಟಾಗಿ, ಸುಂದರವಾಗಿ, ಅದೂ ನಿಮ್ಮ ಕೈಬರಹದಿಂದಲೇ ಆ ಪತ್ರಿಕೆಯನ್ನು ಹೇಗೆ ಬರೆಯುತ್ತಿದ್ದಿರೋ ಎಂದು ಆಶ್ಚರ್ಯವಾಗುತ್ತದೆ. ನಿಮ್ಮ ನೋಟ್ ಪುಸ್ತಕಗಳೂ ಕೂಡ ನೀಟಾಗಿ ಇರುತ್ತವೆ. ಎಲ್ಲೇ ಇರಲಿ, ನಿಮ್ಮ ನೋಟ್ ಬುಕ್ ಕಂಡ ಕೂಡಲೇ “ಇದು ಸಿದ್ದು ನೋಟ್ಸ್ ಅಲ್ವಾ?” ಎಂದು ಗುರುತಿಸಬಹುದು. ಅಷ್ಟೇ ಅಲ್ಲ, ನಾವು ನಾಟಕ ಪ್ರಾಕ್ಟೀಸ್ ಮಾಡೋವಾಗ ಗೊತ್ತಾಯ್ತು, ನೀವು ಬರೀ ಸಾಹಿತಿಯಲ್ಲ, ಒಳ್ಳೇ ನಟರೂ ಕೂಡ ಎಂದು. ನಿಮ್ಮ ಕನ್ನಡ ಸಂಘದಿಂದ ನಾನೂ ಕೂಡ ಕನ್ನಡಕ್ಕೆ ಸ್ವಲ್ಪ ಸೇವೆ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿರಿ. ಆದರೆ, ನಿಮ್ಮ ನಂತರ ಆ ಸಂಘವನ್ನು ಯಶಸ್ವಿಯಾಗಿ ಮುಂದುವರಿಸುವುದಕ್ಕೆ ನಮ್ಮ ಕೈಲಿ ಸಾಧ್ಯವಾಗಲಿಲ್ಲ. ಕ್ಷಮಿಸಿ.
ಎಂ.ಎಸ್.ಜ್ಯೋತಿ, ಸಾಫ಼್ಟ್ ವೇರ್ ಇಂಜಿನೀಯರ್ (ಅಮೇರಿಕಾ)

ವಿಚಾರವಾಹಿನೆಯ ಸಂಪಾದಾಕರೇ,

ಅನಿಸಿಕೆಗಳನ್ನು ಅನಿಸಿದಂತೆಯೇ
ಅಲ್ಪಾವಧಿಯಲ್ಲಿ ಅರಹುವುದು ಅಥವಾ
ಅಲ್ಪ ಸ್ಥಳದಲ್ಲಿ ಅಭಿವ್ಯಕ್ತಿಸುವುದು
ಅಸಾಧ್ಯವಲ್ಲದಿದ್ದರೂ ಅಯೋಮಯವಾದುದು

ಅಪರೂಪದ ಪ್ರತಿಭೆ ಹೊಂದಿದ್ದರೂ
ಅಹಂಭಾವ, ಅಹಂಕಾರ ಕೊಂಚವೂ ಇಲ್ಲದಿರುವುದು
ಅಚ್ಚರಿಯೇ ಸರಿ

ಅಡಗಿರುವ ನಿಮ್ಮಲ್ಲಿಯ ಕಲೆಗೆ
ಅವಿರತ ಪ್ರಯತ್ನದಿಂದ
ಅಂದವಾದ ರೂಪು ಕೊಡುತ್ತೀರೆಂಬುದೇ ನನ್ನ ಆಶಯ.
ಪ್ರತಿಮ, ಸಾಫ಼್ಟ್ ವೇರ್ ಇಂಜಿನೀಯರ್

ಪ್ರೀತಿಯ ಸಿದ್ದು,
ನನ್ನನ್ನು ನಾಟಕದಲ್ಲಿ ಅಭಿನಯಿಸಲು ಆಹ್ವಾನಿಸಿದಾಗಲೇ ನನ್ನ ನಿನ್ನ ಪರಿಚಯವಾದದ್ದು. ನಿನ್ನ ಸಲಿಗೆ, ನಡವಳಿಕೆ ಹಾಗು ಒಳ್ಳೆಯತನ ನನಗೆ ಅದೆಷ್ಟು ಇಷ್ಟವಾಯಿತೆಂದು ಇಲ್ಲಿ ಬರೆಯಲಾಗುವುದಿಲ್ಲ. ಮುಂದೆ ನನ್ನನ್ನು ನೆನಪಿಸಿಕೊಳ್ಳುತ್ತೀಯೆಂದು ನಂಬಿದ್ದೇನೆ.
ಆರ್. ಮಧುಸೂದನ್, ಸಾಫ಼್ಟ್ ವೇರ್ ಇಂಜಿನೀಯರ್ (ಲಂಡನ್)

ಪ್ರೀತಿಯ ಸಿದ್ದು,
ನೀನು ನನ್ನ ಓದಿನ ಬಗ್ಗೆ ನೀಡಿದ ಪ್ರೋತ್ಸಾಹವನ್ನು ನಾನು ಎಂದಿಗೂ ಮರೆಯುವಂತಿಲ್ಲ. ಈ ಅವಕಾಶ ನನಗೆ ಮೊದಲಿನಿಂದಲೂ ಸಿಗಲಿಲ್ಲವಲ್ಲಾ ಎಂಬುದೇ ಕೊರಗು. ಹಳ್ಳಿಗಾಡಿನ ಶಾಲೆಗಳಲ್ಲಿ ಸಿಗುವ ಶಿಕ್ಷಣದ ಬಗ್ಗೆ ನೀನು ಚರ್ಚಿಸಿದ್ದು ಇನ್ನೂ ನೆನಪಿದೆ. ಅದಕ್ಕೊಂದು ಗಾಂಧೀಜಿಯವರ ಸಂದೇಶವನ್ನು ಅರ್ಥೈಸಬಹುದು (“ಸುಸಂಸ್ಕೃತ, ಸಜ್ಜನರ ಗೃಹಕ್ಕೆ ಸಮಾನಾದ ಶಾಲೆ ಇನ್ನೊಂದಿಲ್ಲ” – ಗಾಂಧೀಜಿ). ಹೆಚ್ಚಿಗೆ ಬರೆಯಲು ನಾನು ನಿನ್ನಂತೆ ಸಾಹಿತಿಯಲ್ಲ. ನಿಮ್ಮ ಸಾಹಿತ್ಯಾಭಿಮಾನ, ಓದು, ನಡತೆ, ಸ್ನೇಹ ಇನ್ನಷ್ಟು ಬೆಳೆಯಲಿ ಎಂದು ಹಾರೈಸುವ.
ವಿ.ಪುಟ್ಟಸ್ವಾಮಿ, ಇಂಜಿನೀಯರ್ (ಕೆ.ಇ.ಬಿ)

ಆತ್ಮೀಯ ಗೆಳೆಯ,
ಒಮ್ಮೆ ನಿನ್ನ ಭಾವಚಿತ್ರ ಸಮೇತ “ವಿಚಾರವಾಹಿನಿ”ಯನ್ನು ನೋಡಿದಾಗ “ಎಲಾ ಇವ್ನಾ” ಎಂಬ ಆಶ್ಚರ್ಯದ ಜೊತೆಗೆ, ನಮ್ಮ ಮಣ್ಣಿನ ಮಗ ಎಂಬ ಖುಷಿಯೂ ಆಯ್ತು. ನಂತರ ವಿಚಾರವಾಹಿನಿಯ ಮೂಲಕ ನೀನೂ ಬೆಳೆದದ್ದು, ಹಲವಾರು ಪ್ರತಿಭೆಗಳನ್ನು ಪರಿಚಯಿಸಿದ್ದು ಇತಿಹಾಸ. ಒಂದರ ಹಿಂದೊಂದರಂತೆ ಬರುವ “Test” ಹಾಗೂ “Submission”ಗಳ ಗಡಿಬಿಡಿಯಲ್ಲೂ ಸತತ ಮೂರು ವರ್ಷಗಳ ಕಾಲ ವಿಚಾರವಾಹಿನಿಯನ್ನು ನಡೆಸಿಕೊಂಡು ಬಂದದ್ದು ಶ್ಲಾಘನೀಯ. ನೋವಿನ ಸಂಗತಿ ಎಂದರೆ, ನಿನ್ನ ಈ ಕಾರ್ಯಕ್ಕೆ ಕಾಲೇಜಿನಿಂದ ಯಾವುದೇ ಪ್ರೋತ್ಸಾಹ ಸಿಗದಿದ್ದದ್ದು. ಕಾಲೇಜು ಬಿಟ್ಟು ಹೊರ ಬರುವ ಸಂದರ್ಭದಲ್ಲಾದರೂ ಗೌರವಿಸಿವ ಸೌಜನ್ಯ ತೋರದೇ ಇದ್ದದ್ದು. ಬಿಡು “ಹಾಡು ಹಕ್ಕಿಗೆ ಬೇಕೆ….”. ನಿನ್ನ ಪ್ರೋತ್ಸಾಹದ ನುಡಿಗಳಿಂದಲೇ ನಾನೂ ವಿಚಾರವಾಹಿನಿಗೆ ಒಂದೆರಡು ಅಕ್ಷರಗಳನ್ನು ಗೀಜಿದ್ದು.
ಜಯರಾಮು, ಮಂಡ್ಯ