Category: ಸಿನಿಗವನ

ಆರೋಹಣ

ಪ್ರೇಮ ಪರ್ವತಾರೋಹಣ ಮಾಡೇ ಹೊರಡೋಣ ಎದೆಯ ಭಾವಗಳ ಬಾವುಟ ಅಲ್ಲೇ ಚಿತ್ರಿಸಿ ಹಾರಿಸೋಣ ನೆನಪಿಗಿರಲೊಂದು ಸಂಪುಟ ಮುದ್ರಿಸಿ ಇಟ್ಟುಕೊಳ್ಳೋಣ! ಏರುವಾದಿಯಲಿ ಕಾಡಿವೆ ಹಾಡೋ ಹಕ್ಕಿಗಳು, ಗೂಡಿವೆ ಹುಲಿ-ಚಿರತೆ ಸಿಂಹಾದಿ ವಿಷಜಂತು ಕಾದಿವೆ ಏನೇ ಎದುರಾಗಲಿ, ಗುರಿ- ಬಿಡದ ದಾರಿ ಹಿಡಿಯೋಣ! ಅಲ್ಲಿ ಹರಿವ ಜಲಪಾತದಲಿ ಹಳತ ಕೊಳೆ ತಳ ಸೇರಲಿ ಜಗವ ಮರೆತು, ಜನರ ಹೊರತು ಹೊಸತು ಬಾಳನು ಬಿತ್ತೋಣ ಎಷ್ಟು ಬೇಕಷ್ಟರಲ್ಲಿ, ಹೇಗೆ ಬದುಕುವುದೆಂದು ತಿಳಿಸೋಣ!

ಒಂಟಿತನ

ಬಾನ ಬಯಲಾಗಿದೆ ಬತ್ತಲೆ, ಬರೀ ಕತ್ತಲೆ ಮುನಿಸಿನಿಂದಿದೆ ನಭ ಭೂದೇವಿಯ ಮೇಲೆ ಚಂದಿರನ ಸುಳಿವಿಲ್ಲ ಬೆಳಕನ್ನು ತರಲಿಲ್ಲ ತಾರೆಗಳೂ ತಾವೇಕೊ ಇಂದವನ ಬಳಸಿಲ್ಲ ಗಾಳಿಗೂ ಕಚಗುಳಿಯ ಮೂಡಿಸುವ ಮನಸಿಲ್ಲ ಮೋಡಕೂ ಅದರೊಡನೆ ತಾನಾಡುವ ಒಲವಿಲ್ಲ ಹೂವಾದರೂ ಉಸಿರಾಡಿ ಗಂಧವನು ಬಿಡುತ್ತಿಲ್ಲ ಮಳೆಯಾಗಿದೆ, ಮರದಿಂದ ಜೀರುಂಢೆಯ ದನಿಯಿಲ್ಲ ವಿಧಿಯೊಡನೆ ಕಾದಾಡಿ ಬರಿಗೈಯ್ಯೇ ನಿನಗಿಂದು ದಾರಿ ನೋಡೆನು ಫಲ? ಪ್ರಿಯತಮನ ಬರುವಿಲ್ಲ

ಪ್ರಶ್ನೆಗಳು

ನಾ ನಿನ್ನ ಕೇಳಬೇಕೆಂದುಕೊಳ್ಳುತ್ತಿದ್ದೆ ಅದೇಕೆ ಹಾಗೆ, ನೋಡಿ ನಕ್ಕಿದೆ? ನಾ ಬಹುದಿನಗಳಿಂದಲೂ ಬೆಳೆಸಿ, ಪೋಷಿಸಿದ ಎಳೆಯ ಭಾವನೆಗಳು ನಿನಗೆ ಅಪಹಾಸ್ಯವೆ? ಮಳೆಯ ಬಿಲ್ಲಿನೊಳು ಎದೆಯ ತುಂಬಿರಲು ಬಗೆ ಬಗೆಯ ಕನಸುಗಳವು ನಿನಗೆ ಲಘುವಾದವೆ? ಚೆಲುವ ಕಾಂತಿಯನು ಒಲವ ಪ್ರಣತಿಯಲಿಟ್ಟು ಪೂಜೆ ಮಾಡಿದ ಪರಿಯು ನಿನಗೆ ಅವಮಾನವೆ? ನಗೆಹೂವ ರಾಶಿಯನು ಮೊಗಹೊತ್ತ ರೀತಿಯನು ಕಂಡು ಮೋಹಿಸಿದ್ದೊಂದು ನಿನಗೆ ಅಪರಾಧವೆ? ನೀ ಬಹುಶಃ ನಾನಾಗಿ ನನ್ನಂತೆ ನಿನಗಾಗಿ ಪರಿತಪಿಸಿ ಪರದಾಡಿದರೆ ನಿನಗೆ ಅನುಕೂಲವೆ?

ದಿಟ್ಟತನ

ಎದೆಯಾಳದೊಳಗೆಲ್ಲೋ ಕಟ್ಟಿ ಬಚ್ಚಿಟ್ಟಿರುವ ಕನಸು ಬುತ್ತಿಯ ಬಗ್ಗೆ ನಿನಗೆ ತಿಳಿಯಿತಾದರು ಹೇಗೆ? ಚೆಲುವಿನಾಸರೆಯೊಸೆದು ಕಣ್ಣೊಳಗಿಂದ ಅಲ್ಲಿಳಿದು ನೀನವನು ಹೆಕ್ಕಿ ಹೆಕ್ಕಿ ಕತ್ತು ಹಿಸುಕುವುದನು ಕಂಡ ಮೇಲೂ ಮೂರ್ಖನಾಗಲಾದೀತೆ? ಹೋಗೆ ಹೋಗೆ!

ಮಾತು-ಮೌನ

ನೆನಪಿಸಿಕೊ, ಆಗ ಹೇಗೆ ಜೊತೆ-ಜೊತೆಗೆ ಹೆಜ್ಜೆಯೊಳಗೆಜ್ಜೆಯಿಟ್ಟು ಲಜ್ಜೆ ಎಂಬುದನ್ನು ಬದಿಗಿಟ್ಟು ಬಾಂಬಣ್ಣ ಕರಗುವವರೆಗೂ ಹರಟುತ್ತಿದ್ದದ್ದು ಅದೆಷ್ಟು? ನರ ನರಗಳೂ ನಿಮಿರಿ, ಅಂಗಾಂಗಗಳೆಲ್ಲವೂ ಅದುರಿ ಹೊಟ್ಟೆ ಕಟ್ಟುವವರೆಗೂ ಬಿಡದೆ ನಕ್ಕಿಬಿಟ್ಟಿದ್ದೆಷ್ಟು? ಯಾರಿರಲಿ, ಬಿಡಲಿ ಏನಂದರೂ ಅನ್ನಲಿ ನಮಗೇನು? ಲೆಕ್ಕಿಸದೆ, ಇಬ್ಬರು- ಒಬ್ಬರಾಗಿ ಅಲೆದದ್ದೆಷ್ಟು? ಊಹಿಸಿಕೋ ಈಗ ಕಾಯುತಿರುವೆವು ಹೇಗೆ? ಮತ್ಸರವ ಮುಂದಿಟ್ಟು ಬೆಳೆದ ಭಾವಗಳ ಬಲಿಗಿಟ್ಟು ಕಾದು ಬೂದಿಯಾಗುವವರೆಗೂ ಎದೆಯ ಕೆಂಡದೊಳಗಿಟ್ಟು ಮಾತೆಲ್ಲಾ ಮೌನವಾಗಿ ಮೌನವದು ನೀರಾಗಿ ಕಣ್ಣೊಳಗೆ ಕರಗಿ ಜಾರಿದರೂ...

ಹುಡುಗಿ ನೋಡುವಾಗಿನನುಭವ – ಕಳ್ಳತನ

ಹುಡುಗಿ ನಿನ್ನ ನೋಡಲು ಬಂದ ನನ್ನ ಪರದೆಯ ಮರೆಯಿಂದ ಕದ್ದು ನೋಡಿದೆ ನನ್ನೆದುರೇ ಕಳ್ಳತನ ಮಾಡಿದೆ ಹೊರಟು ನಿಂತಾಗ ಬಾಗಿಲ ಬಳಿ ಬಂದೆ “ಮತ್ತೆ ಬರುವಿರಾ?” ಎಂದೇನೋ ಕೇಳಬೇಕೆಂದು ಹೇಗೇ? ಅಂದುಕೊಂಡೆ ನಾನದನ್ನು ಗಮನಿಸಿದೆ ಮುಂದೆ ನಾ “ರಿಕ್ಷಾ ಎಲ್ಲಿ ಸಿಗುತ್ತದೆ?” ಎಂದು ತಂಗಿಯನ್ನು ಕೇಳಿದ್ದೇ ತಡ ತಕ್ಷಣ ನೀನು ಉತ್ತರಿಸಿದೆಯಲ್ಲಾ “ಅಲ್ಲೇ ಮುಂದೆ” ನಾಚಿಕೆ ಇಲ್ಲದೆ.

ಕೆ ಎಸ್ ನ ಆಯ್ಕೆ ಸಿನಿಗವನ – ಪ್ರಶ್ನೆ

(ತುಷಾರದಲ್ಲಿ) ಗೆಳತಿ ನಾ ಕಂಡಾಗಲೆಲ್ಲಾ ನಿನ್ನ ಕಣ್ಣಲ್ಲಿ ಒಂದು ಮಲ್ಲಿಗೆಯ ಹೂವರಳಿ ನಗುವುದೇಕೆ? ನಿನ್ನ ಸವಿಮಾತುಗಳು ನನ್ನೆದೆಯ ಅಂಗಳದಿ ಒಲವಿನ ರಂಗೋಲಿ ಇಡುವುದೇಕೆ? ನಿನ್ನ ಕೈ ಬೆರಳುಗಳ ನವಿರಾದ ಸ್ಪರ್ಷಕ್ಕೆ ನನ್ನ ಮೈಮನಗಳಲ್ಲಿ ಮಿಂಚಿನ ಬಳ್ಳಿಗಳು ಹರಿವುದೇಕೆ? ನಿನ್ನ ಆ ಮುಂಗುರುಳು ಮೆಲುಗಾಳಿಗಲುಗಿ ಒಲವ ತೊಟ್ಟಿಲೊಳಿಟ್ಟು ನನ್ನ ತೂಗುವುದೇಕೆ? ನಿನ್ನ ನಡೆ ಬಳುಕಿರಲು ನನ್ನ ಮಾನಸ ವೀಣೆ ಮಧುರ ಮೋಹನರಾಗವ ನುಡಿಸುವುದು ಏಕೆ?

ಸಿನಿಗವನ – ವಿರಕ್ತ ಭಾವದಲಿ

ನಿಶ್ಯಬ್ಧದೆಡೆಗೆ ನಿರ್ದಿಷ್ಟ ಗುರಿಯಿಲ್ಲದೆ ನಿಂತು ಯೋಚಿಸಿದರೇನು ಬಂತು ಗುರಿಯಿಲ್ಲದ ಬಾಳು ದೊರೆಯಿಲ್ಲದ ನಾಡು ಎಂಬಂಥಹ ಈ ಸ್ಥಿತಿಯಲ್ಲಿ ನಗಬಾರದೆಂದೆನಿಸಿದರೂ ನಗುತಾನಂದದಲಿ ಅಳಬೇಕೆನಿಸಿದರೂ ಅಳಲಾಗದ ನೋವಿನಲಿ ಎಷ್ಟು ದಿನ ಹೀಗೇ ಕಾಲ ಕಳೆಯಲಿ? ಕಣ್ಣು ಮುಚ್ಚಿ ಕ್ಷಣವೊಮ್ಮೆ ನಿಶ್ಚಿಂತೆಯಲಿ ಎಲ್ಲವನ್ನೂ ಮರೆತು, ಎಲ್ಲರನ್ನೂ ತೊರೆದು, ಎಲ್ಲರಿದ್ದರೂ ಯಾರಿರದೇ, ಎಲ್ಲೆ ಮೀರಲೂ ಕೈಲಾಗದೇ ಎಲ್ಲೋ ಮುಖಮಾಡಿ ನಿಂತ ನನ್ನ ದಯನೀಯ ಗತಿ ಕಂಡು ಕೇಳದಿದ್ದವರೆಲ್ಲಾ ಕೇಳುವ ಹೇಳಲಾಗದಿದ್ದವರೆಲ್ಲಾ ಬುದ್ಧಿ ಹೇಳುವ ಆ ದಿನ...

ಸಿನಿಗವನ – ಮಿಲನಕಾಲ

ತಂದಾನೋ ತಂದಾನೋ ತಾನೋ ತಂದಾನೋ ತಂದಾನೋ ತಾನೋ ತಂದಾನೋ ತಂದಾನೋ ತಾನೀ ತಂದಾನೋ ಮುಸ್ಸಂಜೆ ಹೊತ್ತಲ್ಲಿ ಮೋಡ ಮುತ್ತಿನ ನೀರಲ್ಲಿ ಹಾಡ ಹಾಡುತ್ತಾ ಭೂಮಿಗೆ ರಂಗು ತಂದಾವೋ… ಎತ್ತಿಂದ ಬಂದಾವೋ ಹೀಗೆ ಹುಟ್ಟುತ್ತಾ ಒಂದೊಂದೇ ಹಾಗೇ ಒಟ್ಟಾಗಿ ಬಾನಲ್ಲಿ ತಾರೆ ನಕ್ಕಾವೋ… ಹೊತ್ತಾರೆ ಸೂರ್ಯನ ಹಾಗೇ ಕೆಂಪಾದ ಕೆನ್ನೆಯ ಮ್ಯಾಗೆ ಚೆಂದಾದ ರಂಗೋಲಿಗಳು ಮೂಡ್ಯಾವೋ… ಸಂಗಾತಿ ಬಾರೆಂದು ಕೂಗಿ ಕಣ್ಣಲ್ಲಿ ಸಂಕೋಚ ತೂಗಿ ಹೆಣ್ಣಿನ ಮನಸಲ್ಲಿ ಆಸೆ ಮೂಡ್ಯಾವೋ… ಚಂದಿರ...