ಆಸೆ


ನಿನ್ನ ಚೆಂದುಟಿಗಳ
ರಸ ಹೀರುವ ದುಂಭಿ
ನಾನಾಗುವಾಸೆ

ನಿನ್ನ ಕಣ್ಣ ಕಾಸರದಿ
ಸಣ್ಣ ಮೀನಾಗಿ ನಾನು
ತೇಲಾಡುವಾಸೆ

ನಿನ್ನ ನಡುವನು ಬಳಸಿ
ಬೆನ್ನನಾಳುವ ಜಡೆಯ
ಚೆನ್ನು ಸವಿವಾಸೆ

ನಿನ್ನ ಚೆಲುವುನ ನಗೆಯ
ನಿಂತ ನಿಲುವಿನ ಬಗೆಯ
ಕಣ್ತುಂಬಿಸಿಕೊಳ್ಳುವಾಸೆ

ನಿನ್ನ ಮಲ್ಲಿಗೆಯ ಮುಡಿಗೆ
ಮುಂಗುರುಳಿನ ಮುಗಿಲಿಗೆ
ಏಣಿಯಿಡುವಾಸೆ

ನೀನು ಸಿಕ್ಕಿದರೆ ಎದುರು
ತಪ್ಪು-ಒಪ್ಪುಗಳ ಮರೆತು
ನಕ್ಕುಬಿಡುವಾಸೆ

ನೀನು ಒಪ್ಪಿದರೆ ಒಮ್ಮೆ
ಅಪ್ಪಿ ಕೆನ್ನೆಗೆ, ಹಣೆಗೆ
ಮುತ್ತನಿಡುವಾಸೆ

ನಿನ್ನ ದೇಹದ ಸಿರಿಗೆ
ಮುದ್ದಿನರಗಿಣಿಮರಿಗೆ
ಕಾಮನ ಬಿಲ್ಲೂಡುವಾಸೆ

ರತಿಯ ಮೀರಿಸುರತಿಯ
ಮೈಮರೆತು ಮೋಹದಲಿ
ಎತ್ತಿಕೊಳ್ಳುವಾಸೆ

ತಾರೆ ಗೆಳತಿಯೇ ನಿನ್ನ
ಹತ್ತಿರಕೆ ಬಾ ಎಂದು
ಕೈ ಚಾಚುವಾಸೆ

You may also like...

Leave a Reply