ಗುಮ್ಮ


ಆ ರಾತ್ರಿ ಏಕೋ, ಮಲಗಲಾಗಲಿಲ್ಲ
ಮನಸು ಮಾಮೂಲಿನಂತಿರಲಿಲ್ಲ
ಎದ್ದು ಕೂತೆ,
ಏನೋ ಸರಿಯಿಲ್ಲವೆನಿಸಿತ್ತು, ದಣಿವಿತ್ತು

ನಿದ್ದೆಯಲ್ಲೇ ನಡೆದೆ ಕಿಟಕಿಯ ಕಡೆ
ತುಸು ತೆರೆಕೊಂಡಂತಿತ್ತದರ ಬಾಗಿಲು
ಉರಿವ ಧಗೆ,
ಗಾಳಿಗೇನಾಗಿತ್ತೋ ಕಾಣೆ ಪೂರ್ತಿ ಸರಿಸಿದೆ

ಕುರುಡನೆಂದೆನಿಸಿತಾ ಒಂದು ಕ್ಷಣ
ಕಾಣದೇನೂ ಆಚೆಕಡೆ, ಅನಂತದೆಡೆಗೂ
ಕಾಡ ಕತ್ತಲೆ,
ಬಾನಲ್ಲೂ ಹೊಳಹಿಲ್ಲ, ಬೆಳಕಿಂಡಿಯಿಲ್ಲ

ಇಂತಿಪ್ಪ ಇರಿಳಿನಲಿ, ಅಲ್ಲೆಲ್ಲೋ ದೂರದಲ್ಲಿ
ಪಳಕ್ಕನರಳಿದ ಕಣ್ಣುಗಳು, ತಟಕ್ಕನೆ ಮಾಯ
ಪುಡಿಯಾಯ್ತು ಗುಂಡಿಗೆ
ಸಿಡಿಲೊಡೆದ ಭೀತಿಯಲ್ಲೂ ಕಣ್ದಿಟ್ಟಿ ಕಿಟಕಿಯಲಿ

ಮೈ ಎಲ್ಲೋ, ಮನಸೆಲ್ಲೋ ಒಂದಾದಂತಿರಲಿಲ್ಲ
ಅದಿದನು, ಇದದನು ಕೇಳುವಂತಿರಲಿಲ್ಲ
ಮೈ-ಸಲಹೆ ದಿಕ್ಕರಿಸಿ
ಮನಸೇಕೋ ತಲೆಯೆತ್ತಿ ಮತ್ತಲ್ಲೇ ದಿಟ್ಟಿಸಿತು

ಫಳ-ಫಳನೆ ಹೊಳೆದೊಳೆದು, ಥರ-ಥರದಿ ನಲಿನಲಿದು

ಗುರಿ ನಾನೇ ಎಂಬಂತೆ, ಕಿಟಕಿಯನೇ ಮುರಿವಂತೆ

ಇಡಿಯಾಗಿ ಕತ್ತಲೆಯೇ

ನನ್ನೆಡೆಗೆ ಧುತ್ತರಿಸಿ ನುಗ್ಗಿ ಬರುವಂತಿತ್ತು ಆವರಿಸಿ

You may also like...

Leave a Reply