ದಂಡನೆ (ಕರ್ಮವೀರದಲ್ಲಿ ಪ್ರಕಟಿತ ಕತೆ)


ಮನುಷ್ಯ ಯಾವುದಾದರೊಂದು ಹವ್ಯಾಸಕ್ಕೆ ಅಧೀನನಾಗಿರುತ್ತಾನೆಂದು ಭಾವಿಸಿದಂತಿದ್ದ ಹರೀಶನಿಗೆ ತನ್ನ ಬಗ್ಗೆ ಮಾತ್ರ ಆ ನಂಬಿಕೆ ಇರಲಿಲ್ಲ. ಬಡ ಮಾಸ್ತರರೊಬ್ಬರ ಏಕೈಕ ಪುತ್ರನಾಗಿದ್ದ ಹರೀಶ ಹಲವಾರು ಆದರ್ಶಗಳನ್ನು ಮೈಗೂಡಿಸಿಕೊಂಡೇ ಬೆಳೆದವನಾಗಿದ್ದನು. ತಂದೆಯ ಶಿಸ್ತಿಗೆ ತಕ್ಕಂಥ ಮಗನೆಂದೇ ಆತ ಎಲ್ಲಾ ಪರಿಚಿತರಿಂದಲೂ ಹೊಗಳಿಸಿಕೊಳ್ಳುತ್ತಿದ್ದ. ಓದುವುದರಲ್ಲೂ ತನ್ನ ಆಸಾಧಾರಣತೆಯನ್ನು ಅಭಿವ್ಯಕ್ತಿಸುತ್ತಿದ್ದ ಹರೀಶ ಎಲ್ಲರಿಗೂ ತುಂಬಾ ಅಚ್ಚು-ಮೆಚ್ಚಿನವನಾಗಿಯೂ ಇದ್ದ. “ಮುಂದೆ ಏನಾದರೊಂದು ಸಾಧಿಸಿಯೇ ತೀರುತ್ತೇನೆ” ಎಂಬಂಥ ಆಶಾವಾದದ ಮಾತುಗಳನ್ನಾಡುತ್ತಿದ್ದ ಮಗನ ಭವಿಷ್ಯ ನೆನೆನೆನೆದು ಹೆತ್ತವರು ಆಗ್ಗಾಗ್ಗೆ ಹಿಗ್ಗುತ್ತಿದ್ದದ್ದೂ ಉಂಟು.

’ಬೆಂಗಾಡು’ ಎಂದೇ ಕರೆಯಲಾಗುತ್ತಿದ್ದ ಹಳ್ಳಿಯೊಂದರಲ್ಲಿ ಐವರು ಅನುಜರೊಂದಿಗೆ ಜನಿಸಿದ್ದ ಶಂಕರಯ್ಯನವರು ಮನೆಗೆ ಹಿರಿಮಗ. ಉಪಾಧ್ಯಾಯ ವೃತ್ತಿಗಾಗುವಷ್ಟೇನೋ ಓದಿಕೊಂಡಿದ್ದರೂ, ನಿರಿದ್ಯೋಗದ ಕಾವಿನಿಂದ ಕಂಗೆಟ್ಟು ಅಂಡಲೆದು ಅವಕಾಶಗಳಿಗಾಗಿ ಕೊನೆಗೆ ಬೇಸತ್ತು ಬೇಸಾಯಕ್ಕೆ ಹಿಂದಿರುಗಿದ್ದರು. ಒಂದಷ್ಟು ಅಪ್ಪನ ಆಸ್ತಿ ಎಂತಿದ್ದರೂ, ಮಳೆರಾಯನ ಅವಕೃಪೆಯಿಂದಾಗಿ ಅವಸಾನಗೊಂಡಂತಿದ್ದ ಧರಿತ್ರಿದೇವಿ ಅವರನ್ನು ಇನ್ನಷ್ಟು ದರಿದ್ರರನ್ನಾಗಿ ಮಾಡುವ ಸೂಚನೆ ನೀಡಿದ್ದಳು. ಇಂಥಹ ಪರಿಸ್ಥಿತಿಯಿಂದಾಗಿ ಜೀವಕಳೆ ಕಳೆದುಕೊಂಡಂತಿದ್ದ ಶಂಕರಯ್ಯನವರು ಊರಜನರಿಂದ “ಓದಿಯೂ ಕೆಲಸವಿಲ್ಲದವ” ಎಂದೂ ಕರೆಸಿಕೊಳ್ಳುತ್ತಿದ್ದದ್ದೂ ಉಂಟು.

“ಇಂದಿನ ಕಾಲಕ್ಕೆ ಓದು ಒಂದು ಶಾಪ, ಕೆಲಸ ಸಿಗದಮೇಲೆ ಓದುವುದಾರರೂ ಯಾಕಪ್ಪಾ !” ಎಂಬುದಾಗಿ ಓದಿನ ಮಹತ್ವವನ್ನೇ ಅರಿಯದ ಹಳ್ಳಿಜನಗಳ ತಪ್ಪು ತಿಳಿವಳಿಕೆಯ ದಿಕ್ಕು ಬದಲಾಯಿಸುವುದು ದುಸ್ಸಾಧ್ಯ ಎಂಬುದನ್ನು ಚೆನ್ನಾಗಿ ತಿಳಿದುಕೊಂಡಿದ್ದರು ಶಂಕರಯ್ಯ. ಅವರು ಎಂದೂ ಅದರ ಗೋಜಿಗೆ ಹೋಗದೆ ತಮ್ಮ ಓದಿನ ದಿನಗಳನ್ನು ನೆನೆದು ನೆನೆದು ತಮ್ಮಷ್ಟಕ್ಕೆ ತಾವೇ ಸಂತೋಷಪಟ್ಟುಕೊಳ್ಳುತ್ತಿದ್ದರು. ಕಾಲೇಜಿನ ಅನಂತನುಭವಗಳ ಬುತ್ತಿ ಬಿಚ್ಚಿ ಕೂತರೆ, ಆಹ್ಲಾದತೆ ಅವರ ಮೈ-ಮನಸ್ಸನ್ನು ಆವರಿಸಿಕೊಳ್ಳುತ್ತಿತ್ತು. ಅದರ ಆನಂದ ಸವಿಯಲು ಎಲ್ಲರಿಂದ ಮರೆಯಾಗಿ ಊರಾಚೆಯ ಮರದಗೆ ದೌಡಾಯುತ್ತಿದ್ದರು. ಅಲ್ಲಿ ಸ್ವಚ್ಛಂದ ನೀಲಿಯಲಿ ಸ್ವೇಚ್ಚಾನುಸಾರ ಸಂಚರಿಸುವ ಹಕ್ಕಿಗಳ ಚಲನೆಯಲ್ಲೇ ದಿಟ್ಟಿನೆಟ್ಟು ಅವರ ಕಣ್ಣುಗಳು ಪ್ರದಕ್ಷಿಣೆ ಹಾಕುತ್ತಿದ್ದವು. ಅವು ದಿಗಂತದಾಚೆ ವಿಗತವಾದ ಮೇಲೆ ಜುಗುಪ್ಸೆಯಿಂದ ಅವರ ದೃಷ್ಟಿ ಹಿಮ್ಮರಳಿ ಬಯಲ ತುಂಬೆಲ್ಲಾ ತುಂಬಿಕೊಳ್ಳುತ್ತಿತ್ತು.

ಎಷ್ಟು ದೂರ ನೋಡಿದರೂ ಬರಿದು ಬರಿದಾಗೇ ಕಾಣುವ ಬಂಜರು ಭೂಮಿ. ಚೈತ್ರದೂತನ ಇನಿದನಿಯಂತೂ ಇಲ್ಲದಾಗಿತ್ತು. ನಿರ್ಜಲವಾಗಿದ್ದ ಆ ಜಾಗದಲ್ಲಿ ತಣ್ಣೆಲರಿಗೂ ಬರ. ಒಟ್ಟಾರೆ ಅಲ್ಲಿನ ಪರಿಸರ ಅವರಿಗೆ ಎಂದೂ ಹಿಡಿಸಿರಲಿಲ್ಲ. ಅವರ ನಿರ್ವಹಣಾ ಸಾಮರ್ಥ್ಯವನ್ನೂ ಮೀರಿ ದುಡಿಯಬೇಕಾಗಿದ್ದ ದುಃಸ್ಥಿತಿ ತುಂಬಾ ಕಷ್ಟ ಎನಿಸುತ್ತಿತ್ತೋ ಎನೋ “ಒಂದು ಕೆಲಸ ಎಂದಾಗಿಬಿಟ್ಟರೆ !” ಎಂಬುದೊಂದಾಸೆಯನ್ನು ಮಾತ್ರ ಇನ್ನೂ ಜೀವಂತವಾಗಿ ಉಳಿಸಿಕೊಂಡು ಉಸಿರಾಡುತ್ತಿದ್ದರು.

ಮಾರನೆಯ ದಿನ ಅಂಚೆಯಣ್ಣ ತಂದು ತಲುಪಿಸಿದ್ದ ಕೆಂಬಣ್ಣದ ಕವರೊಂದು ಹಳ್ಳಿಯವರೆಲ್ಲರ ಕೈಯೊಳಗಾಡಿ ಕೊನೆಗೆ ಶಂಕರಯ್ಯನವರ ಹಸ್ತ ಸೇರಲು ಅರ್ಧ ತಾಸು ತೆಗೆದುಕೊಂಡಿತ್ತು. “ಈ ಹೊಸ ಪೋಸ್ಟ್ ಮ್ಯಾನುಂಗೆ ನಮ್ಮೂರೋರ ಅಡ್ರಸ್ಸೆ ಸರಿಯಾಗಿ ಗೊತ್ತಿಲ್ಲ ನೋಡು ಶಂಕ್ರಣ್ಣಾ. ತಕ್ಕೊ ನಿಂಗ್ಯಾವ್ದೋ ಕಾಗ್ದ ಬಂದದೆ” ಪಟೇಲರ ಮನೆಯಾಳು ಮರಿಮಾದ ಕಾಗದ ತಂದು ಶಂಕರಯ್ಯನವರಿಗೆ ತಲುಪಿಸಿದ. ಕಾಗದ ಬಂದಿದ್ದ ವಿಳಾಸವನ್ನು ನೋಡುತ್ತಿದ್ದಂತೆ ಅವರಲ್ಲಿ ಕೌತುಕ ಹಾಗೂ ಭಯ ಒಟ್ಟಿಗೆ ಆದವು. ಕವರನ್ನು ಪರ‍್ರನೆ ಹರಿದು ಶ್ವೇತವರ್ಣ ಹಾಳೆಯೊಂದನ್ನು ಹೊರತೆಗೆದು ಬಿಚ್ಚಿ ಕಣ್ಣರಳಿಸಿದರು ಶಂಕರಯ್ಯ. “ಕೆಲ್ಸ್-ಗಿಲ್ಸದ್ದೆ ಮಗಾ?” ಮೂಲೆಯಲ್ಲಿ ಮುದುಡಿ ಮಲಗಿದ್ದ ಮುದುಕಿಯೊಂದು ಅವರನ್ನು ಕೇಳಿದ ಪ್ರಶ್ನೆಗೆ “ಹೂಂ” ಎಂದು ಉತ್ತರಿಸುತ್ತಾ ಅದನ್ನು ಓದಿ ಮುಗಿಸಿದರು. ಆನಂದಾಶ್ರುವಿನಿಂದ ಅವರ ಕಣ್ಣುಗಳು ಒದ್ದೆಯಾದವು. ಉಲ್ಲಾಸದ ಬುಗ್ಗೆ ಬಾನೆತ್ತರಕ್ಕೆ ಚಿಮ್ಮಿ ಹಾರಿದಂತಾಯ್ತು. ಮರೆತೆಹೋದಂತಾಗಿದ್ದ ಅವರ, ಕೆಲಸವೊಂದಕ್ಕೆ ಅರ್ಜಿ ಹಾಕಿದ್ದು, ಸಂದರ್ಶನಕ್ಕೂ ಹೋಗಿ ಬಂದಿದ್ದು, ನಂತರ ಇಷ್ಟು ದಿನಗಳವರೆಗೂ ಅದರ ಫಲಿತಾಂಶವೂ ತಿಳಿಯದಿದ್ದದ್ದು, ಮುಂತಾದ ನೆನಪುಗಳು ಒಂದೇ ಕ್ಷಣದಲ್ಲಿ ಅವರ ಸ್ಮೃತಿಯಲ್ಲಿ ಬಂದು ಹೋದವು.

ಅದೊಂದು ಪಟ್ಟಣ ಎಂದು ಹೇಳಲಾಗದಿದ್ದರೂ ಹೆಚ್ಚು ಕಡಿಮೆ ಅದಕ್ಕೆ ತಾಳೆಮಾಡಬಹುದಾಗಿದ್ದ ಊರೊಂದರಲ್ಲಿ ಉಪಾಧ್ಯಾಯ ವೃತ್ತಿ ಆರಂಭಿಸಿ ಪತ್ನಿ ಸಾವಿತ್ರಿಯೊಂದಿಗೆ ಸಂಸಾರಕ್ಕೆ ಪಾಯ ಹಾಕಿದರು ಶಂಕರಯ್ಯ. ಮದುವೆಯಾಗಿ ಮೂರು ವರ್ಷಗಳು ಕಳೆದಿರಬೇಕು, ಆಗ ಹುಟ್ಟಿದ ಹರೀಶನನ್ನು ಕೂಸುಮರಿಮಾಡಿಕೊಂಡು ಕುಣಿಯುವಷ್ಟರಲ್ಲಿ ಅವರ ವಯಸ್ಸು ಮೂವತ್ತನ್ನೂ ಮೀರಿ ಮುಂದೆ ಹೋಗಿತ್ತು ಎಂಬ ಸತ್ಯವನ್ನು ಅವರು ಎಂದೂ ಜ್ಞಾಪಿಸಿಕೊಂಡಿರಲಿಲ್ಲ. ಕೆಲಸ ಹಾಗೂ ಸಂಸಾರದ ಮಧ್ಯೆ ಮಗನ ಆಗಮನ ಅವರಿಗೆ ಅತೀವ ಸಂತಸ ತಂದಿತ್ತು. ಭೂತಕಾಲದಲ್ಲಿ ಹೂತುಹೋಗಿದ್ದ ಕನಿಕಷ್ಟಗಳನ್ನು ನೆನಪಿಸಿಕೊಳ್ಳುವ ಸೈರಣೆಯನ್ನು ಕಳೆದುಕೊಂಡಿದ್ದ ಶಂಕರಯ್ಯನವರು ತನ್ನೆಲ್ಲಾ ಮನಃಕ್ಲೇಶಗಳೂ ಮಾಯವಾಗಿ ಹೋದಂತೆ ನಿಶ್ಚಿಂತರಾಗಿ ನಾಗರೀಕ ಜೀವನಕ್ಕೆ ನಾಂದಿಹಾಡಿ ಮಗನ ಭವಿಷ್ಯವನ್ನು ರೂಪಿಸುವ ಹೆಗ್ಗುರಿಯೊಂದನ್ನು ಹೆಗಲ ಮೇಲೆ ಹೊತ್ತುಕೊಂಡರು.

ಹರೀಶ ಕಾಲದ ಜೊತೆ ಬೆಳೆದು ಪರೀಕ್ಷೆಯೊಂದನ್ನು ಪಾಸುಮಾಡಿ ಪದವಿ ಮಟ್ಟದ ಮೆಟ್ಟಿಲೇರುವಷ್ಟರಲ್ಲಿ ಒಂದಷ್ಟಗಲ ಮನೆ ಮಾಡಿಕೊಂಡಿದ್ದರು ಶಂಕರಯ್ಯ. ಕಷ್ಟ ಬಂದಲ್ಲಿ ಮಗನ ವಿದ್ಯಾಭ್ಯಾಸದ ಖರ್ಚಿಗಾಗಿ ಅದನ್ನು ಮಾರಿ ಬಿಡಲೂ ತಯಾರಿದ್ದರು. “ಇಂಜಿನೀರಿಂಗ್ ಕಲಿಕೆ ಎಂದರೆ ಸುಮ್ಮನೆ ಆದೀತೆ?” ಅದು ಅವರಿಗೆ ತಿಳಿದ ವಿಷಯವಾಗಿತ್ತು. ಸದ್ಯಕ್ಕೆ ತಮ್ಮ ಸಂಪಾದನೆಯ ಉಳಿತಾಯದಲ್ಲೇ ಮಗನ ಇಂಜಿನೀರಿಂಗ್ ಖರ್ಚನ್ನು ನಿಭಾಯಿಸುತಿದ್ದರು ಶಂಕರಯ್ಯ. ಪರಮೇಶನ ದಯೆಯಿಂದ ಇದ್ದೊಬ್ಬ ಮಗ ಇಂಜಿನಿಯರ್ ಆಗುವನೆಂಬ ನೆಮ್ಮದಿ ಅವರ ಮೈ-ಮನವನ್ನೆಲ್ಲಾ ವ್ಯಾಪಿಸಿಕೊಂಡಿತ್ತು. ಮುಂದೆ ಭವಿಷ್ಯದಲ್ಲಿ ಕಾಣಸಿಗಬಹುದೆಂದುಕೊಂಡಿದ್ದ ಪರ್ವಕಾಲ ಶಂಕರಯ್ಯನವರಿಗೆ ಆಗಲೇ ಶುರುವಾಗಿತ್ತು. ಮಗನ ಉನ್ನತಿ ಅವರ ಎದೆಯನ್ನು ಹಿಗ್ಗಿಸಿತ್ತು. ಹರೀಶನೂ ಅವರಾಸೆಯಂತೆ ಶ್ರದ್ಧೆಯಿಂದ ತನ್ನ ವಿದ್ಯಾಭ್ಯಾಸದಲ್ಲಿ ಎಂದೂ ಮುಂದೆ ಇರುತ್ತಿದ್ದನು.

ಈ ಸಂತಸದ ಶಾಶ್ವತತೆಯನ್ನು ಹರೀಶನಿಂದ ನಿರೀಕ್ಷಿಸುತ್ತಿದ್ದರು ಶಂಕರಯ್ಯ. ಅದುವರೆಗೂ ಕಳೆದಿದ್ದ ಮಗನ ಮೂರೂ ವರ್ಷಗಳು ಸುಂದರ ಹಾಗೂ ತೃಪ್ತಿದಾಯಕವಾಗಿದ್ದವು. ಮಿತಿಮೀರಿದ್ದ ಆತನ ಖರ್ಚಿನಿಂದ ಅವರು ಎಂದೂ ಧೃತಿಗೆಟ್ಟಿರಲಿಲ್ಲ. ಆದರೆ, ಇತ್ತೀಚೆಗೆ ರಜೆಯ ದಿನಗಳಲ್ಲಿ ಬಂದು ಹೋಗುವ ಹರೀಶನ ಅಭ್ಯಾಸದಲ್ಲಿ ಸ್ವಲ್ಪ ಬದಲಾವಣೆಯನ್ನು ಗಮನಿಸಿದ್ದರು. ಬಹುಶಃ ಪರೀಕ್ಷೆಯ ಒತ್ತಡದಿಂದಿರಬೇಕೆಂದು ಮಡದಿಯನ್ನೂ, ತಮ್ಮನ್ನು ತಾವೇ ಸಂತೈಸಿಕೊಳ್ಳುತ್ತಿದ್ದರು. ದಿನಕಳೆದಂತೆ ಈ ವಿಷಯದಲ್ಲಿ ಸುಧಾರಣೆಯನ್ನು ನಿರೀಕ್ಷಿಸಿದ್ದ ಶಂಕರಯ್ಯನವರು, ಆಗಾಗ್ಗೆ ಬಂದು ತೃಪ್ತಿನೀಡಿ ಹೋಗುತ್ತಿದ್ದ ಹೋಗುತ್ತಿದ್ದ ಹರೀಶನ ರೂಢಿಯಲ್ಲಿನ ಏರುಪೇರಿನಿಂದಾಗಿ ಸ್ವಲ್ಪ ಅಂಜಿದ್ದರು. ಬರುಬರುತ್ತಾ ಹಿಂದೆಂದೂ ಕಾಣಸಿಗದಿದ್ದ ವ್ಯತ್ಯಾಸವನ್ನು ಮಗನ ನಡವಳಿಕೆಯಲ್ಲಿ ಗುರುತಿಸುತ್ತಿದ್ದರು. ಅವನ ಈ ವರ್ತನೆ ಅವರಿಗೆ ವಿಚಿತ್ರವೆಂದೆನಿಸುತ್ತಿತ್ತು ಜೊತೆಗೆ ನಂಬಲಾರದಾಗಿತ್ತು. “ನಮ್ಮ ಹರೀಶನಿಗೆ ಏನಾಗಿದೆ?” ಎಂದು ಕೆಲವೊಮ್ಮೆ ನೊಂದದನಿಯಲ್ಲಿ ಮಡಿದಿಯ ಮುಂದೆ ಎದೆಯಳಲು ತೋಡಿಕೊಳ್ಳುತ್ತಿದ್ದರು.

ಅದುವರೆಗೂ ಎಲ್ಲವೂ ಚೆಂದ ಅನ್ನಿಸಿದ್ದ ಶಂಕರಯ್ಯನರರಿಗೆ ಜೀವದ ಸವಾಲುಗಳು ಸಾಲುಗಟ್ಟಿ ನಿಂತಿವೆಯೇನೋ ಅನ್ನಿಸತೊಡಗಿತ್ತು. “ಏನೇನು ಕಾದಿವೆಯೋ?” ತಮ್ಮಷ್ಟಕ್ಕೆ ತಾವೇ ಮಾತನಾಡಿಕೊಳ್ಳುತ್ತಾ ಶಾಲೆಯಿಂದ ಬಂದವರೇ ಮನೆಯೊಳಗೆ ಕಾಲಿಡುತ್ತಿದ್ದಂತೆ ಎಂದಿನಂತೆ “ಸಾವಿತ್ರಿ” ಎಂದು ಕೂಗಿದರು. ಅದು ಅವರ ವಾಡಿಕೆಯಾಗಿತ್ತು. ಆದರೆ, ಇಂದು ಮನೆಯೆಲ್ಲಾ ಏಕೋ ಮಗುಮ್ಮಾಗಿತ್ತು. ಅವರ ಇಷ್ಟು ವರ್ಷದ ಜೀವನಯಾತ್ರೆಯಲ್ಲಿ ಮಡದಿ ಸಾವಿತ್ರಿಯಿಂದ ತಮ್ಮ ಮಾತಿಗೆ ಉತ್ತರವಿಲ್ಲದ ಮೊದಲ ದಿನ ಅದಾಗಿತ್ತು. ಗಾಬರಿಗೊಂಡು ಹುಡುಕಾಡಿದರು. ಕೋಣೆಯೊಂದರಲ್ಲಿ ಮಂಚದ ಮೇಲೆ ಮಲಗಿದ್ದ ಸಾವಿತ್ರಮ್ಮ, ತಮ್ಮ ಮುಖವನ್ನು ಮಾತ್ರ ಕಂಬಳಿಯಿಂದ ಹೊರಗುಳಿಸಿ, ಉಳಿದೆಲ್ಲಾ ಭಾಗವನ್ನು ಭದ್ರವಾಗಿ ಹೊದ್ದು ಚಳಿಯಿಂದ ನಡುಗುತ್ತಿದ್ದರು. ಹತ್ತಿರ ಬಂದು ನೋಡಿದ ಶಂಕರಯ್ಯನವರು ದಿಜ್ಞ್ಮೂಡರಾದರು. ಅವರ ಹೃದಯ ಭೀತಿಯಿಂದ ಬಡಬಡಿಸಿತು. ನರಗಳೆಲ್ಲಾ ಅಭದ್ರಗೊಂಡಂತಾಗಿ ನಡುಗುವ ಧ್ವನಿಯಲ್ಲಿ

“ಏನೇ ಸಾವಿತ್ರಿ? ಯಾಕೇ ಕಣ್ಣೀರು?”

ಶಂಕರಯ್ಯನವರ ಕಾರಣಕ್ಕೆ ಆತಂಕವೂ ಇದ್ದಿತ್ತು. ಅವರು ಹಿಂದೆಂದೂ ಹೆಂಡತಿಯನ್ನು ಇಂಥಹ ವೇದನಾವಸ್ಥೆಯಲ್ಲಿ ಕಂಡಿದ್ದಿರಲಿಲ್ಲ.

ಸಾವಿತ್ರಮ್ಮನ ಕಣ್ಣುಗಳು ಕಂಬನಿಯಿಂದ ತೋಯ್ದು ಕಾಂತಿ ಕಳೆದುಕೊಂಡಿದ್ದವು. ಅವರ ಮುಖ ಲಕ್ಷಣ ಅನಿರೀಕ್ಷಿತ ಆಘಾತವೊಂದರಿಂದ ವಿಚ್ಛಿನ್ನವಾದ ಮನಸ್ಸಿಗೆ ಹಿಡಿದ ಕನ್ನಡಿಯಂತಾಗಿತ್ತು. ನಿಧಾನವಾಗಿ ಎದ್ದು ಕೂತು ನಾಲಗೆ ಸಡಿಲಿಸಿ ನುಡಿಯಲಾರಂಭಿಸಿದರು.

ಅಂದು ಮಧ್ಯಂದಿನ ಹರೀಶ ಧಾವಿಸಿ ಬಂದವನೆ ಇಪ್ಪತೈದು ಸಾವಿರ ರೂಪಾಯಿಗಳಿಗಾಗಿ ಹುಯಿಲೆಬ್ಬಿಸಿದ್ದ. ಆ ಕ್ಷಣದಲ್ಲೇ ಬೇಕೆಂಬುದಾಗಿಯೂ, ಇಲ್ಲದಿದ್ದರೆ ತಾನು ಜೀವಂತ ಉಳಿಯುವುದು ಕಷ್ಟಸಾಧ್ಯವೆಂದೂ, ತಾಕೀತು ಮಾಡಿ ಕೊನೆಗೆ ಅಪ್ಪನಿಲ್ಲದೆ ನಿಷ್ಫಲನಾಗಿ ಹಿಂದಿರುಗಿದ್ದ. “ಶಾಲೆಯಿಂದ ಅಪ್ಪ ಬರುವವರೆಗಾದರೂ ಇರು” ಎನ್ನುವ ಅಮ್ಮನ ಕೋರಿಕೆಯನ್ನೂ ದಿಕ್ಕರಿಸಿ ಹೊರಟಿದ್ದ.

ಈ ಮಾತುಗಳು ಸಾವಿತ್ರಮನ್ನ ಬಾಯಿಯಿಂದ ಹೊರಬರುತ್ತಿದ್ದಂತೆಯೇ ಶಂಕರಯ್ಯನವರ ಮನಸ್ಸು ಮುದುಡಿಕೊಂಡಿತು. ಮಗನ ಮೇಲಿದ್ದ ಆಸ್ಥೆ ದಿಕ್ಕೆಟ್ಟಿತು. ಆ ಒಂದು ಕ್ಷಣ ಅವರನ್ನು ಸುತ್ತುಗಟ್ಟಿದ ಆಲೋಚನೆಗಳು ಗಣನಾತೀತ. “ತಿಳಿನೀರ ಕೊಳದಲ್ಲಿ, ಕಡಲ ಮೊರೆತವೇ?” ನಂಬಲಾಗಲಿಲ್ಲ ಅವರಿಗೆ. ಸಾವಿತ್ರಮ್ಮನ ಮುಂದುವರಿದ ಮಾತುಗಳನ್ನು ಕೇಳುವ ಉತ್ಸಾಹವಿರಲಿಲ್ಲ ಅವರಲ್ಲಿ. ಬದಲಾಗಿ ಮಗನನ್ನು ನೋಡಿಬರುವ ದಿಗಿಲು ಅಮರಿಕೊಂಡಿತು. ಅಂದು ರಾತ್ರಿಯೆಲ್ಲಾ ಬಾರದ ನಿದ್ದೆಯನ್ನು ಬಲವಂತ ಪಡಿಸಿ ಸುಸ್ತಾಗಿದ್ದ ಶಂಕರಯ್ಯನವರು ಬೆಳಿಗ್ಗೆ ಬೇಗನೆ ಎದ್ದು ಬಸ್ ನಿಲ್ದಾಣದತ್ತ ದಡದಡನೆ ಹೆಜ್ಜೆ ಹಾಕಿದರು.

ಪ್ರಯಾಣದ ಉದ್ದಕ್ಕೂ ಬಸ್ಸಿನ ಕುಲುಕಾಟದ ಜೊತೆಗೆ, ಅವರ ಆಲೋಚನೆಗಳೂ ಅಂಕೆ ಮೀರಿ ಅವರ ತಲೆಯನ್ನು ಇನ್ನಷ್ಟು ಸಿಡಿಸುವ ಕೆಲಸ ಮಾಡುತ್ತಿದ್ದವು. ಇದರಿಂದ ಅವರ ಉದ್ವೇಗ ಹೆಚ್ಚಾದಂತಾಗಿ, ಬಸ್ಸಿನ ವೇಗ ಮಂದ ಅನ್ನಿಸುತ್ತಿತ್ತು. ವಾತ್ಸಲ್ಯಮತ್ತರಾಗಿ ಮಗನ ಬಗ್ಗೆ ಅರಳಿಸಿಕೊಂಡಿದ್ದ ವಿಫುಲ ಆಸೆಯೊಂದು ಅವರ ಎದೆಯಾಂತರಾಳದಲ್ಲಿ ಆಗಲೇ ಕಮರಿಹೋಗಿತ್ತು. ಬಸ್ಸು ನಿಂತು ಕಂಡಕ್ಟರ್ ಕೂಗಿಕೊಂಡ ಧ್ವನಿ ಕಿವಿಗಪ್ಪಳಿಸಿ ಮೆದುಳಿನಲ್ಲಿ ಸಂಚರಿಸಿದಾಗ ಎಚ್ಚರಗೊಂಡಂತವರಾಗಿ ಕೆಳಗಿಳಿದು ಅಷ್ಟ ದಿಕ್ಕುಗಳಿಗೂ ದೃಷ್ಟಿ ಬೀರಿದರು ಶಂಕರಯ್ಯ. ಮಗನ ಹಾಸ್ಟೆಲ್ ಹುಡುಕುವುದೇ ಅವರ ಮುಂದಿನ ಕೆಲಸವಾಗಿದ್ದರಿಂದ ಹಾದಿಗಾಗಿ ಸಿಕ್ಕವರನ್ನೆಲ್ಲಾ ಸಹಾಯ ಕೇಳುತ್ತಾ, ಹುಡುಕಾಡುತ್ತಾ, ಹೇಗೋ ಅದರ ಹತ್ತಿರ ಬಂದು ನಿಂತಾಗ ಅವರಿಗೆ ಕಷ್ಟದಲ್ಲೂ ಖರ್ಚಿನ ಲೆಕ್ಕವನ್ನೇ ನೋಡದೆ, ಮಗನಲ್ಲೂ ಅದರ ನೋವನ್ನು ತೋರಿಸಿಕೊಳ್ಳದೆ, ಎಲ್ಲರಿಗೂ ಸರಿಸಮಾನವಾಗೇ ಹರೀಶನನ್ನು ಓದಿಸಬೇಕೆಂದುಕೊಂಡು ಪಟ್ಟ ಪಾಡುಗಳೆಲ್ಲಾ ಈ ಒಂದು ಪಟ್ಟಣದಲ್ಲಿ ವ್ಯರ್ಥವಾಗಿ ಹೋಯಿತಲ್ಲಾ ಎಂದು ನೊಂದುಕೊಂಡರು. ಅವರು ಎಷ್ಟೇ ತಡೆದರೂ ಕಣ್ಣುಗಳು ಮಾತ್ರ ಅವರ ಮಾತುಗಳನ್ನು ಕೇಳುವ ಸ್ಥಿತಿಯಲ್ಲಿರಲಿಲ್ಲ. ಒಂದೆರಡು ಹನಿಗಳನ್ನು ಹೊರಗೆಡವಿದವು. ಕಣ್ಣೊರೆಸಿಕೊಂಡ ಶಂಕರಯ್ಯನವರು ಅಲ್ಲೇ ಗೇಟಿಗೆ ಒರಗಿ ನಿಂತಿದ್ದ ಹುಡುಗನೊಬ್ಬನನ್ನು ಕರೆದು

“ಇಂಜಿನೀರಿಂಗ್ ಹಾಸ್ಟೆಲ್ ಇದೇನಪ್ಪಾ?”

“ಹೌದು! ಯಾರು ಬೇಕಾಗಿತ್ತು ನಿಮಗೆ?” ಆತ ಕೇಳಿದ

“ಇಲ್ಲಿ ಹರೀಶಾಂತಾ…”

“ಓಹೋ ಹರೀಶಾನಾ.. ನೀ…ವು?”

“ಅವ್ನ ತಂದೆ. ಶಂಕರಯ್ಯ ಅಂತಾ” ಹುಡುಗನಿಗೆ ತಡಮಾಡದೆ ಹೇಳಿದರು.

“ಹೀಗೆ ಒಳಗೋಗಿ.. ಅವುನ್ದು ರೂಂ ನಂಬರು ೭೦. ಸಾಮಾನ್ಯವಾಗಿ ಅವ್ನು ಯಾವಾಗ್ಲೂ ರೂಂನಲ್ಲಿ ಇರೋಲ್ಲಾ, ಯಾವುದಕ್ಕೂ ಒಂದ್ಸಾರಿ ನೋಡಿ”

“………………”

ಸ್ವಲ್ಪ ಹೊತ್ತು ಏನೋ ಹೋಚಿಸಿದ ಹುಡುಗಾ ಮುಂದುವರೆಸಿ ಮಾತನಾಡಿದ.

“ನೀವು ಒಂದು ಕೆಲ್ಸ ಮಾಡಿ. ರೂಂ ಹತ್ರ ನೋಡಿ, ಅಲ್ಲಿಲ್ಲಾಂದ್ರೆ ಅಲ್ಲೇ ಮ್ಯಾನೇಜರ್ ಇರ್ತರೆ ಕಾರ್ನರ್ ರೂಂ ೩೫ ರಲ್ಲಿ. ಅವುರನ್ನೇ ವಿಚಾರ‍್ಸಿ. ಅವುರ‍್ಗೆ ಎಲ್ಲಾ ಗೊತ್ತಿರುತ್ತೆ”

ಔಪಚಾರಿಕವಾಗಿ ನುಡಿದು ಆತ ಅಲ್ಲಿಂದ ಕಾಲ್ತೆಗೆದ.

ಒಳಗೆ ಸವಿಸ್ತಾರವಾಗಿ ಹರಡಿಕೊಂಡಿದ್ದ ಹಸಿರು ಹಾಸು. ಇಂಚಷ್ಟೂ ವ್ಯತ್ಯಾಸವಿಲ್ಲದೆ ಅದರ ನಡೂಮಧ್ಯೆ ನಿರ್ಮಿಸಿದ್ದ ವರ್ತುಳಾಕಾರವಾದ ಕಾರಂಜಿಯಿಂದ ಚಿಮ್ಮಿ, ಮತ್ತೆ ಮುಗಿಲಿಗೇರುವ ಸಾಹಸಮಾಡಿ ಸೋತು ಕೆಳಗಿಳಿಯುತ್ತಿದ್ದ ನೀರು ಕಾರಂಜಿಯನ್ನು ಆಲಂಗಿಸಿಕೊಂಡಿದ್ದ ಹೂಗಿಡಗಳ ಮೇಲೆ ಹನಿಹನಿಯಾಗಿ ಹುದುರುತ್ತಿತ್ತು. ಇನ್ನೂ ಹಗಲಕ್ಕೆ ಕಣ್ಣಾಡಿಸಿದರೆ ಬಣ್ಣ ಬಣ್ಣದ ಹೂಪದರವೊಂದು ಹಸಿರನ್ನೆಲ್ಲಾ ಆಲಂಗಿಸಿಕೊಂಡು ನಿರ್ಜಿವವಾಗಿ ಸುತ್ತುಗಟ್ಟಿ ನಿಂತಿದ್ದ ಹಾಸ್ಟೆಲ್ ರೂಮುಗಳಿಗೆ ಚೈತನ್ಯ ತಂದುಕೊಟ್ಟಿತ್ತು. ತಮ್ಮ ಬೆಂಗಾಡಿನ ಬಟ್ಟ ಬಯಲಿಗೆ ಹೋಲಿಸಿದರೆ ಈ ಸುಂದರ ತಾಣ ಶಂಕರಯ್ಯನವರಿಗೆ ಸ್ವರ್ಗಸಮಾನವಾಗಿ ಕಂಡಿತು. ಆದರೆ ಇಂಥಹ ಪ್ರಶಾಂತತೆಯಲ್ಲೂ ಅವರ ಮನಸ್ಸು ಪ್ರಕ್ಷ್ಯುಬ್ಧ ಸ್ಥಿತಿಯಲ್ಲಿತ್ತು. ಆ ಹುಡುಗ ಉತ್ತರಿಸಿದ ರೀತಿ ಹರೀಶನ ದುರ್ಲಕ್ಷ್ಯತನಗಳನ್ನು ಎತ್ತಿ ತೋರಿಸಿದಂತೆ ಕಂಡಿತು ಅವರಿಗೆ. “ಏಕೆ ಹೀಗೆ?” “ಇಪ್ಪತೈದು ಸಾವಿರ ರೂಪಾಯಿಗಳಾದರೂ ಯಾತಕ್ಕಾಗಿ?” “ಈಗನೇನಾದರೂ ದಾರಿ ತಪ್ಪಿರಬಹುದೇ?” ಮುಂತಾದ ಪ್ರಶ್ನೆಗಳು ಅವರನ್ನು ಗೊಂದಲಕ್ಕೀಡುಮಾಡಿದ್ದವು. ಆದರೆ ಹಾಸ್ಟೆಲ್‍ನ ನಿಶ್ಯಬ್ಧತೆ ಮಾತ್ರ “ಹಾಗಾಗಿರಲು ಸಾಧ್ಯವಿಲ್ಲ” ಎಂದು ಮೌನವಾಗೇ ಹೇಳಿದಂತೆನಿಸಿತು. ಇಂಥಹ ನೂರಾರು ಯೋಚನೆಗಳಿಂದ ನಿತ್ರಾಣಗೊಂಡಿದ್ದ ಶಂಕರಯ್ಯನವರು ರೂಂ ನಂಬರ್ ಎಪ್ಪತ್ತನ್ನು ಹುಡುಕಾಡುತ್ತಿದ್ದ ಸ್ಥಿತಿಯಲ್ಲೇ ಇದ್ದರು.

“ಯಾರೋ ಅದು? ಅಷ್ಟೊತ್ತಿಂದ ಯಾರನ್ನೋ ಹುಡುಕ್ತಿದ್ದಾರೆ ಅನ್ಸುತ್ತೆ” ಹಾಸ್ಟೆಲ್ ಮ್ಯಾನೇಜರು ಜವಾನನನ್ನು ಕೇಳಿದ.

“ಗೊತ್ತಿಲ್ಲಾ ಸಾರ್” ಸ್ವಲ್ಪ ದೂರದಲ್ಲೇ ಸುತ್ತಾಡುತ್ತಿದ್ದ ಶಂಕರಯ್ಯನವರ ಕಡೆ ದಿಟ್ಟಿಸುತ್ತಾ ಉತ್ತರಿಸಿದ.

“ಕರ‍್ಕೊಂಡು ಬಾ ಇಲ್ಲಿಗೆ” ಹೇಳಿ ತನ್ನ ರೂಮ್ ಒಳಹೋದ ಮ್ಯಾನೇಜರ್, ಹಿಂದಿನಿಂದ ಒಳಬಂದ ಶಂಕರಯ್ಯನವರಿಗೆ ಕುರ್ಚಿಯ ಕಡೆಗೆ ಕೈತೋರಿಸಿ ಕೂರಲು ಹೇಳಿದ.

ಹರೀಶನ ತಂದೆ ಎಂಬ ಶಬ್ಧ ಶಂಕರಯ್ಯನವರ ಬಾಯಿಂದ ಹೊರಬರುತ್ತಿದ್ದಂತೆಯೇ ಮ್ಯಾನೇಜರ್ ಸ್ಥಿತಿ ಬಿಸಿತುಪ್ಪ ಬಿದ್ದ ನಾಲಗೆಯಂತಾಯ್ತು. ತಕ್ಷಣ ಕೃತಕವಾದ ನಗೆಯೊಂದನ್ನು ಮುಖದ ಮೇಲೆ ಮೂಡಿಸಿಕೊಂಡು ಶಂಕರಯ್ಯನವರ ಪ್ರಶ್ನೆಗಳಿಗೆ ಉತ್ತರಕೊಡಲಾರಂಭಿಸಿದ. ಆತನ ಮಾತಿಗಾಗಿ ಮುಖವನ್ನೇ ನೋಡುತ್ತಾ ಉತ್ಸುಕರಾಗಿ ಕಾದು ಕೂತರು ಶಂಕರಯ್ಯ. ದೇವರ ವರಕ್ಕಾಗಿ ಕೂತ ಭಕ್ತನಂತೆ.

“ಆರಂಭದ ದಿನಗಳಲ್ಲಿ ಹರೀಶ ಸಂಭಾವಿತನಾಗೇ ಇದ್ದ. ತನ್ನ ಓದಿನ ಬಗ್ಗೆ ಧೃಡ ಸಂಕಲ್ಪ ಬೆಳೆಸಿಕೊಂಡು ಎಲ್ಲರಿಂದಲೂ ಹೊಗಳಿಕೆಗೂ ಪಾತ್ರನಾಗಿದ್ದ. ಓದಾಳಿ ಎಂದು ಯಾವಾಗಲೂ ಹೀಯಾಳಿಸುತ್ತಿದ್ದ ಹುಡುಗರಿಗೇನೂ ಬರವಿರಲಿಲ್ಲ ಕಾಲೇಜಿನಲ್ಲಿ. ಅವರೆಲ್ಲರಿಗೂ ತನ್ನ ಸನ್ನಡತೆಯ ಕರಾಮತಿ ತೋರಿಸಿ ಬೆರಗುಗೊಳಿಸಿದ್ದ. ಎಂಥಹ ಪ್ರತಿಭಾವಂತ! ಆದರೆ….

ಜಾತಿವಾದಿ ಪ್ರೊಫೆಸರೊಬ್ಬ ಪ್ರಾಕ್ಟಿಕಲ್ ಪರೀಕ್ಷೆಯಲ್ಲಿ ಫೇಲ್ ಮಾಡಿ, ಹರೀಶನ ವರ್ಚಸ್ಸಿಗೆ ಬರೆಹಾಕಿ ತನ್ನ ತಾಕತ್ತಿನ ಪರಿಚಯ ಮಾಡಿದ್ದನಂತೆ. ಕಾರಣ ನಂತರದ ದಿನಗಳಲ್ಲಿ ’ಅನ್ಯಜಾತಿಯ ಹುಡುಗನೊಬ್ಬನ ಉನ್ನತಿಯ ಅವನತಿಯೇ ಆತನ ಉದ್ದೇಶವಾಗಿತ್ತು’ ಎಂದು ತಿಳಿಯಿತು. ಆದರೆ ಅಷ್ಟರಲ್ಲೇ ಎಲ್ಲಾ ಅನಾಹುತಗಳು ನಡೆದುಹೋಗಿದ್ದವು”

“…..”

ಮುಖವನ್ನೇ ನೋಡುತ್ತಾ ಕುಳಿತಿದ್ದ ಶಂಕರಯ್ಯನವರನ್ನು ಗಮನಿಸಿ, ತಾನೇ ಮುಂದುವರೆಸಿ

“ಇದರಿಂದ ಸಹಜವಾಗೇ ಸಹನೆಗೆಟ್ಟು ಕೆಲವು ಫುಂಡರೊಡಗೂಡಿ, ಪ್ರೋಫೇಸರಿಗೇ ಪಾಠ ಕಲಿಸುವ ಸನ್ನಾಹ ಮಾಡಿದ ಹರೀಶ. ಇದೊಂದು ಸಣ್ಣ ವಿಷಯವೆಂಬುದಾಗಿ ಎಲ್ಲರೂ ತಿಳಿ ಹೇಳಿ ಅವನನ್ನು ಹೇಗೋ ಸಮಾಧಾನ ಪಡಿಸಿದ್ದರು ಕೆಲವು ಉಪಾನ್ಯಾಸಕರು. ಆದರೆ, ಇಂಥಹ ಅವಕಾಶಗಳಿಗಾಗಿ ಸದಾ ಹಾತೊರೆಯುವ ಒಂದು ಗುಂಪೇ ಕಾಲೇಜಿನಲ್ಲಿತ್ತು. ಅವರೆಲ್ಲಾ ಸೇರಿ ಹರೀಶನ ಕಾರ್ಯಕ್ಕೆ ಕುಮ್ಮಕ್ಕು ನೀಡಿ, ತಾವೇ ಸಾರಥ್ಯವಹಿಸಿಕೊಂಡರು. ಆದರಾಭಿಮಾನಗಳಿಂದ ಪ್ರಚೋದಿಸಿ ತಮ್ಮ ಹಾದಿಗೇ ಎಳೆದುಕೊಂಡು ಹಾಳುಗೆಡವಲು ಶುರುಮಾಡಿದರು. ಹರೀಶ ಬಹುಶಃ ವಿಷಘಳಿಗೆಯಲ್ಲಿ ಅವರ ವಶವಾಗಿದ್ದಿರಬೇಕು, ಅವರೆಲ್ಲಾ ಮಂತ್ರಕ್ಕೆ ಮಣಿಯುವಂತಾದನು, ಕುಡಿದು ಕುಣಿಯುವಂತಾದನು. ಹಣವನ್ನು ಅಲಕ್ಷಿಸಲು ಶುರುಮಾಡಿದ. ಕೊನೆಕೊನೆಗೆ, ಇವನನ್ನೇ ಗೌರವಿಸುವ ನಾಟಕವಾಡುತ್ತಾ ದುಷ್ಕಾರ್ಯಗಳ ದವಡೆಗೆ ತಳ್ಳಿ ಜೀವಂತ ಹೆಣಮಾಡತೊಡಗಿದರು. ಇಷ್ಟೆಲ್ಲಾ ನಮಗೆ ತಿಳಿಯುವುದರಲ್ಲಿ ಹರೀಶ ಹದ್ದುಮೀರಿದ್ದ. ದುಶ್ಚಟಗಳ ದಾಸನಾಗಿ ನಿಸ್ತೇಜನಾಗಿದ್ದ.

ನನ್ನ ಜವಾಬ್ದಾರಿಯೊಂದನ್ನು ಅರಿತು ನಿಮಗೆ ವಿಷಯವನ್ನೆಲ್ಲಾ ತಿಳಿಸುತ್ತೇನೆಂದು ಹೇಳಿ ತಡೆಯಲು ಪ್ರಯತ್ನಿಸಿದೆ. ಅವರ ಎಲ್ಲಾ ಆಟಗಳನ್ನು ಅಡ್ಡಗಟ್ಟಲು ಯತ್ನಿಸಿದೆ. ಹಾಸ್ಟೆಲ್‍ನ ಒಳಗೂ, ಹೊರಗೂ ಭೀಮಾಕಾರವಾಗಿ ಬೆಳೆದಿದ್ದ ಹರೀಶ ಹಾಗೂ ಆತನ ಸ್ನೇಹಿತರು ಮದಗಜಗಳ ಮೈಮೇಲೆ ಮಾರಿಬಂದವರಂತೆ ವಿಕರಾಳವಾಗಿ ವರ್ತಿಸಿ ನನ್ನನ್ನು ಹೆದರಿಸಿದ್ದರು. ಭಯಾನಕವಾಗಿ ಕಾಡಿದ್ದರು. ಮನೆಗಳಿಗೆ ತಿಳಿಸದಂತೆ ಬೆದರಿಸಿದ್ದರು, ಅವರೆಲ್ಲಾ ಏನು ಬೇಕಾದರೂ ಮಾಡಬಲ್ಲವರಾಗಿದ್ದರಿಂದ ಎಲ್ಲರೂ ಅವರಿಗೆ ಯಾವಾಗಲೂ ಹೆದರುತ್ತಿದ್ದರು. ಆದರೂ ನನಗೆ ಮನಸ್ಸು ತಡೆಯದೆ ಮೊನ್ನೆ ಕೊನೆಗೂ ನಿಮಗೊಂದು ಕಾಗದ ಬರೆದೆ. ಅದು ತಲುಪುವಷ್ಟರಲ್ಲಿ ನೀವೇ ಬಂದಿರಿ.

ಅಂದಹಾಗೇ ಮೊನ್ನೆ ನಾನು ಕಾಗದ ಬರೆಯಲು ಕಾರಣವೂ ಇತ್ತು.

ಶರ್ಮಿಳಾ! ಪ್ರೊಫೆಸರ ಪಾಲಿಗಿದ್ದ ಒಬ್ಬಳೇ ಮಗಳು. ಅಂದವಾಗಿ ಬೆಳೆದಿದ್ದ ಹುಡುಗಿ. ಪಿಯುಸಿ ಯಲ್ಲಿ ಓದುತ್ತಿದ್ದಳು. ಇದ್ದಕ್ಕಿಂದಓತೆ ಒಂದು ದಿನ ಅವಳ ಅಪಹರಣದ ಸುದ್ದಿ ಊರಲ್ಲೆಲ್ಲಾ ಬಗ್ಗನೆ ಹಬ್ಬಿಕೊಂಡಿತ್ತು. ಪೊಲೀಸರು ಇಲ್ಲಿಗೂ ಬಂದಿದ್ದರು. ಈ ಘಟನೆಗೂ ಮೊದಲು, ಈ ಹಿಂದೆ ಕಾಸಿಗಾಗಿ ಕೈಗೆ ಸಿಕ್ಕವರ ಸುಲಿಯುತ್ತಿದ್ದ ಕೆಟ್ಟಹೆಸರಿನ ಜೊತೆಗೆ ಡ್ರಗ್ ಐಟಂಗಳನ್ನು ಮುಗ್ಧರ ಮೈಗೇರಿಸುತ್ತಿದ್ದ ಆಪಾದನೆಯಲ್ಲೂ ಆರೋಪಿಗಳಾಗಿದ್ದ ಹರೀಶ ಹಾಗೂ ಆತನ ಸ್ನೇಹಿತರನ್ನು ಅನುಮಾನಿಸಿಯೇ ಬಂದಿದ್ದರು ಅವರು. ನಾನೂ ’ಅವರಾರೂ ಇಲ್ಲಿಲ್ಲ” ಎಂಬ ಸತ್ಯವನ್ನು ತಿಳಿಸಿದೆ. ಅವರೂ ಹಿಂದಿರುಗಿದ್ದರು.

ಆದರೆ, ಮಾರನೆಯ ದಿನ ಅಂದರೆ ನಿನ್ನೆ ದಸ್ತಗಿರಿಗೆಂದು ಬಂದಿದ್ದ ಪೊಲೀಸರು ವಿಷಯವನ್ನೆಲ್ಲಾ ವಿವರಿಸಿದಾಗ ನನಗೂ ನಂಬಲಾಗಲಿಲ್ಲ. ಆದರೆ, ಅವರ ಆ ಗುಮಾನಿಗಳೆಲ್ಲಾ ದಿಟವಾಗಿದ್ದವು. ಹರೀಶಾದಿಯಾಗಿ ಎಲ್ಲರೂ ಎಲ್ಲಿಗೋ ಪರಾರಿಯಾಗಿದ್ದರು. ಶೀಲಗೆಟ್ಟು ಶರ್ಮಿಳೆ ಕೊಲೆಯಾಗಿದ್ದಳು”

ಮ್ಯಾನೇಜರು ಮಾತು ಮುಗಿಸಿದ. ಶಂಕರಯ್ಯನವರು ಕುಳಿತಲ್ಲೇ ಶಿಲೆಯಾಂತಾಗಿದ್ದರು. ಸಾವಿತ್ರಮ್ಮ ಮಾತ್ರ ಬೀದಿಯ ದ್ವಾರದಲ್ಲೇ ನಿಂತು ದಾರಿಯನ್ನು ದೃಷ್ಟಿಸುತ್ತಿದ್ದರು.

೧೭-೦೮-೧೯೯೪

You may also like...

Leave a Reply