ಅಭಾಗಿನಿ


ವಿಶಾಲವಾದ ಕಾರೀಡಾರಿನ ಗೋಡೆ ಮಗ್ಗುಲಿನಲ್ಲಿ ಸಾಲು ಬೆಂಚುಗಳನ್ನು ಒಪ್ಪವಾಗಿ ಜೋಡಿಸಲಾಗಿದ್ದ “ಜೀವಾ” ನರ್ಸಿಂಗ್ ಹೋಂ ಅಂದೂ ಕೂಡ ಯಾರೂ ಇಲ್ಲದೆ ಭಣಗುಡುತ್ತಿತ್ತು. ಸಂಜೆಯ ಸೆರಗಿನೊಳಗೆ ಬಹು ಬೇಗನೆ ಜಾರಿಕೊಳ್ಳುತ್ತಿದ್ದ ಇತ್ತೀಚಿನ ದಿನಗಳಲ್ಲಂತೂ ಗಿರಾಕಿಗಳಿಲ್ಲದೇ ಖಾಲಿಹೊಡೆಯುತ್ತಿದ್ದುದ್ದರಿಂದ ತನ್ನ ಪ್ರಸಿದ್ಧಿ, ಪ್ರಭಾವ, ಪಾಂಡಿತ್ಯಗಳೆಲ್ಲಾ ತೀರಾ ತಗ್ಗಿಹೋಗಿವೆಯೆಂದೂ, ಬಹುಕಾಲದಿಂದಲೂ ಜನಗಳನ್ನು ವಂಚಿಸುತ್ತಿದ್ದ ಹಿಕಮತ್ತು ವಗೈರೆಗಳೆಲ್ಲಾ ಉಡುಗಿಹೋಗುತ್ತಿವೆಯೆಂದೂ ಭಾವಿಸಿಕೊಂಡು ಭವಿಷ್ಯದ ತಾಕಲಾಟದಲ್ಲಿ ತಡವರಿಸುತ್ತಾ ಕುಳಿತಿದ್ದ ಗೈನಾಕಾಲಜಿಸ್ಟ್‌ಗೆ ಅಸಾಮಿಯೊಬ್ಬನ ಜೊತೆ ಒಳಬಂದ ನರ್ಸ್‍ಗಳಿಬ್ಬರನ್ನು ಕಂಡು ಆನಂದಾಶ್ಚರ್ಯಗಳೆರಡೂ ಒಟ್ಟಿಗೆ ಆದವು.


A Situational Image

ಆಚೆಕಡೆ ಅಡ್ಡಾಡಿ ಅರ್ಧಗಂಟೆ ದೂಕಿ ಅವಸರವಸರವಾಗಿ ನುಗ್ಗಿ ಒಳಬಂದ ಪಾರ್ವತಿ ತನ್ನ ಹಂಡೆಗಾತ್ರದ ಅಂಡುಗಳನ್ನು ಅಲ್ಲೇ ಇರಿಸಲಾಗಿದ್ದ ಬೆಂಚಿನ ಮೇಲಿಟ್ಟು ಸೆರಗಿನೊಂದೊಮ್ಮೆ ಬೆವರನ್ನು ಒರೆಸಿಕೊಂಡಳು. ಬರೀ ಹಣೆಯ ಅಳತೆಗಷ್ಟೇ ಮೀಸಲಾಗಿದ್ದ ಕುಂಕುಮವು ನರೆತ ತಲೆಗೂದಲುಗಳ ಮೇಲೂ ಲೇಪನಗೊಂಡು ಅವಳ ರಾಕ್ಷಸೀ ಕಳೆಯನ್ನು ವೃದ್ಧಿಗೊಳಿಸಿತ್ತು. ಆ ಮುಖದ ಅಭಿವ್ಯಕ್ತಿಯು ಅದನ್ನು ಸುಸ್ಫಷ್ಟವಾಗಿ ಎತ್ತಿ ಹಿಡಿದಿತ್ತು. ಅಗಲಕ್ಕೆ ಹರಡಿಕೊಂಡಿದ್ದ ಅವಳ ಮೂಗಿನಲ್ಲಿ ಮೂರು ತೊಲಭಾರದ ಮೂಗುತಿಯೊಂದು ಸರ್ವಾಧಿಕಾರ ನಡೆಸುತ್ತಿರುತ್ತಿದ್ದರೆ, ತುಟಿಗಳೆರಡೂ ಹರಿದುಕೊಂಡಂತಿದ್ದ ಅವಳ ಬಾಯೊಳಗೆ ವೀಳ್ಯ ಒದ್ದಾಡುತ್ತಿರುತ್ತಿತ್ತು. ಮಹಾಕಾಳಿಯೋ ಅಥವಾ ಭೂರಿಮಾಯೆಯೋ ಎಂದೇ ಕರೆಯಬಹುದಾಗಿದ್ದ ಅವಳಲ್ಲಿ ಆದಿನ ಆತಂಕವೂ, ಕಳವಳವೂ ಸೇರಿಕೊಂಡು ಅಂದೇಕೋ ಕಳೆಗುಂದಿಸಿ ಬಿಟ್ಟಿದ್ದವು. ಒಂದೇ ಸಮನೆ ಚಡಪಡಿಸುತ್ತಾ, ಯಾವುದೋ ಉತ್ತರದ ನಿರೀಕ್ಷೆಗಾಗಿ ಮಾದೇಶನನ್ನು ಕಾದು ಸುಸ್ತಾಗಿದ್ದಳು. ಒಳಹೋದವ ಇನ್ನೂ ಬಂದಿರಲಿಲ್ಲವಾದ್ದರಿಂದ ಹರಿಬಿರಿಗೊಳ್ಳುತ್ತಿದ್ದಳು. ಅವಳ ಆತುರವನ್ನು ಅರಿತುಕೊಂಡಿರಲಿಲ್ಲ ಮಾದೇಶ. ಅತಿಯಾದ ತವಕದಿಂದಾಗಿ ಒಂದು ಮೊಲೆಯನ್ನು ಸಂಪೂರ್ಣವಾಗಿ ತೊರೆದು ಇನ್ನೊಂದರ ಜೊತೆಯನ್ನೂ ನಿರಾಕರಿಸುವ ಸ್ಥಿತಿಯಲ್ಲಿದ್ದ ತನ್ನ ಸೆರಗನ್ನು ಸರಿಪಡಿಸಿಕೊಂಡವಳೇ ಬಾಗಿಲನ್ನೇ ದಿಟ್ಟಿಸಿದಳು. ಮಾದೇಶ ಹೊರಬಂದ. ಅದುವರೆಗೂ ಬಿಗಿದುಕೊಂಡಿದ್ದ ಅವಳ ಕರಿಮುಖ ಇದ್ದಕ್ಕಿದ್ದಂತೇ ಸಡಿಲಗೊಂಡು ಆನಂದದಿಂದರಳಿ ಊರಗಲ ಹಿಗ್ಗಿತು. ತಕ್ಷಣ ತನ್ನ ಘನಗಾಂಭೀರ್ಯವನ್ನು ಮುರಿದು ಉತ್ಸುಕಳಾಗಿ ಕೇಳಿದಳು.

“ಎಂಥದ್ದು?” ಕಣ್ಣರಳಿಸಿದಳು

ಮಾದೇಶನ ತಲೆ ತಗ್ಗಿತು. ನಿರುತ್ಸಾಹದ ಧ್ವನಿಯಲ್ಲಿ

“…ಹೆಣ್ಣು”

ಮಗನ ಉತ್ತರ ಅವಳ ಮೊಗದಲ್ಲಿ ನಗೆಯ ಹಣತೆಯನ್ನು ನಂದಿಸಿತು. ತನ್ನ ಮೂಗಿನ ತೂತುಗಳನ್ನಿನ್ನಷ್ಟಗಲಿಸಿ, ಬೇಜವಾಬುದಾರಿಯಿಂದೊಮ್ಮ ಕತ್ತನ್ನು ಕೊಂಕಿಸಿದಳು. ಸೋರಿ ಹೋಗಲೆತ್ನಿಸುತ್ತಿದ್ದ ಸಿಂಬಳವನ್ನು ಸೊಯ್ಯನೆ ಒಳಗೆಳೆದು, ಎಲೆಯಡಿಕೆಯೊಡನೆ ಕಲಸಿ, ಜಗಿದು ಕಸದ ಕುಕ್ಕೆಗೆ ಉಗಿದಳು. ಮಾದೇಶ ತಾಯಿಯನ್ನೇ ನೋಡುತ್ತಾ ನಿಂತ.

ಆಕಡೆ ಸ್ಕ್ಯಾನಿಂಗೆಂದು ಕರೆತಂದು ಗಂಟೆ ಸಮಯ ಗತಿಸಿದ್ದರೂ ಇನ್ನೂ ಡಾಕ್ಟರ್ ಬಂದು ಏನೂ ಹೇಳದಿದ್ದುದನ್ನು ಕಂಡು ಸೌಭಾಗ್ಯ ಗಾಬರಿಯಾಗಿದ್ದಳು. ಏಕಾಂಗಿಯಾಗಿ ಮಲಗಿದ್ದ ಸೌಭಾಗ್ಯಳಿಗೆ ಹಿಂದಿನ ನೆನಪುಗಳೆಲ್ಲಾ ಒಮ್ಮೆಲೆ ಸುತ್ತುಗಟ್ಟಿ ನಿಂತು ಅವಳ ಮನೋಭೂಮಿಕೆಯ ಮೇಲೆ ನಾಟ್ಯವಾಡಿ ನರ್ತಿಸತೊಡಗಿದವು. ಎರಡು ಹೆಣ್ಣುಗಳನ್ನು ಹೆತ್ತಿದ್ದೇ ಇದಕ್ಕೆಲ್ಲಾ ಕಾರಣವಾಗಿತ್ತು ಎಂಬುದನ್ನು ಅವಳು ಅರಿತಿದ್ದಳು. “ಆದುದರಿಂದಲೇ ಅಲ್ಲವೇ, ಎರಡು ಸಾಕೆಂಬ ನನ್ನ ಸ್ವಾತಂತ್ರ್ಯವನ್ನು ಧ್ವಂಸ ಮಾಡಿ, ಗಂಡು ಮಗುವೊಂದಕ್ಕಾಗಿ ಮೊಂಡು ಹಿಡಿದು ಮೂರನೇ ಭ್ರೂಣದ ಮಾರಣಹೋಮ ಮಾಡಿಸಿದ್ದು. ನಂತರ ನಾಲ್ಕನೆಯ ಮಗುವನ್ನಾದರೂ ಹೆಣ್ಣಾಗಿರದಿದ್ದರೆ ಉಳಿಸಕೊಳ್ಳಬಹುದಾಗಿತ್ತು” ತನ್ನನ್ನು ತಾನೇ ಪ್ರಶ್ನಿಸಿಕೊಂಡು ಈ ಹಿಂದೆ ಹೀಗೇ ಕರೆತಂದು ಹುನ್ನಾರ ನಡೆಸಿ ವಂಚಿಸಿದ್ದ ಅತ್ತೆ, ಗಂಡ ಹಾಗೂ ಡಾಕ್ಟರುಗಳು ಹಂತಕರೆನ್ನಿಸಿ “ಈ ಬಾರಿಯಾದರೂ ಗಂಡು ಮಗುವೊಂದನ್ನು ದಯಪಾಲಿಸು ದೇವರೇ!” ಎಂದು ದೇವರಲ್ಲಿ ಮೊರೆಯಿಡುತ್ತಾ ಹಾಸಿಗೆಯಲ್ಲೇ ಎದ್ದು ಕುಳಿತಿದ್ದ ಸೌಭಾಗ್ಯಳಿಗೆ ನರ್ಸೊಬ್ಬಳು ಬಂದು ಎಲ್ಲವನ್ನೂ ವಿವರಿಸಿದಾಗ ಆಸ್ಪತ್ರೆಯೇ ಆಸ್ಫೋಟನಗೊಂಡಂತಾಯ್ತು. ಈ ಬಾರಿಯೂ “ಹೆಣ್ಣೇ” ಎಂಬ ಸತ್ಯ ಸ್ಕ್ಯಾನಿಂಗ್‍ನಿಂದ ಬಹಿರಂಗವಾಗಿತ್ತು. ದೊಪ್ಪನೆ ಹಾಸಿಗೆ ಮೇಲುರುಳಿದಳು. ಕ್ಷಣದಲ್ಲೇ ಉಸಿರು ಕಟ್ಟಿದ ಅನುಭವವಾಯ್ತು. ಅಲ್ಲಿಯ ವಾತಾವರಣ, ಜೊತೆಗೆ ಆವರಣವನ್ನೆಲ್ಲಾ ವ್ಯಾಪಿಸಿಕೊಂಡು ರಾಚುತ್ತಿದ್ದ ವಾಸನೆಯೂ ಸೇರಿ ಅವಲ ತಲೆಯನ್ನು ಇನ್ನಷ್ಟು ಸಿಡಿಸಿತು. ಮುಂದಿರುವ “ಅಬಾರ್ಷನ್” ಎಂಬ ಆತಂಕ ಅವಳನ್ನು ಕ್ಷಣಕ್ಷಣಕ್ಕೂ ಭಯಗೊಳಿಸುತ್ತಿತ್ತು. ದಡಕ್ಕನೆ ಮೇಲೆದ್ದಳು. “ಡಾಕ್ಟರ್..” ಎಂದು ಚೀರಿದಳು. ಯಾರೂ ಬಾರದಿದ್ದುದ್ದಕ್ಕೆ ಮತ್ತಷ್ಟು ಬೇಸರವಾಯ್ತು. ಭಯದಿಂದ ಅಳು ಆವರಿಸಿತು. ಅಸಹಾಯಕತೆಯಿಂದ ಅಳುತ್ತಿದ್ದಳು. ಹೆಣ್ಣೆಂಬ ಕಾರಣದಿಂದ ಇದ್ದೆರಡು ಹೆಣ್ಣು ಮಕ್ಕಳನ್ನೂ ಅತ್ತೆ ಹಾಗೂ ಗಂಡ ಸೇರಿ, ಅಮ್ಮನ ಮನೆಗೇ ಕಳುಹಿಸಿಬಿಟ್ಟಿದ್ದರು. ಆ ಮಕ್ಕಳು ಎದುರು ನಿಂತಂತಾಯ್ತು. ಕರುಳು ಹಿಂಡಿತು. ಎಲ್ಲರನ್ನೂ ತೃಪ್ತಿಯಾಗುವವರೆಗೂ ಮನಸ್ಸಿನಲ್ಲೇ ಬೈದುಕೊಂಡಳು. ಅತ್ತೆಯೊಬ್ಬ “ಚಂಡಾಲಿ” ಅನ್ನಿಸಿತು. “ಕಲಿಯುಗದ ಹೆಮ್ಮಾರಿ” ಎಂದುಕೊಂಡಳು. ಕೊನೆಗೆ ಏನೂ ಮಾಡಲಾಗದ ಅವಳ ಪರಿಸ್ಥಿತಿ ಕಂಡು ಅವಳಿಗೇ ಅಸಹ್ಯವೆನಿಸಿತು. “ಅಯ್ಯೋ ವಿಧಿಯೇ!” ಎಂದು ನಿಟ್ಟುಸಿರಿಟ್ಟಳು.

ಅದುವರೆವಿಗೂ ದಿನಗಳನ್ನು ಎಣಿಸಿಕೊಂಡೇ ಕಳೆದಿದ್ದಳು ಸೌಭಾಗ್ಯ. ಇನ್ನು ಅದು ಸಾಧ್ಯವಿಲ್ಲವೆಂದೆನಿಸಿತು. ಸಾವನ್ನೊಮ್ಮೆ ಕಲ್ಪಿಸಿಕೊಂಡಳು. ಕರುಳು ಕಿವುಚಿದಂತಾಗಿ ಏಕೋ ಬೇಡವೆನ್ನಿಸಿತು. ಕಣ್ಣುಗಳೂ ಕೂಡ ಮುಚ್ಚಿಕೊಳ್ಳಲು ಹಠಮಾಡಿದವು. ಗಂಡನ ಹೆಣ್ತನವನ್ನು ಕಂಡು ಹೇಸಿಗೆಯೆನಿಸಿ ನಕ್ಕಳು. ಬಹುಕಾಲದಿಂದಲೂ ಹೇರಿಕೊಂಡಿದ್ದ ಹೊರೆಯೊಂದು ಹಗುರಗೊಂಡಂತೆ ತಾನೇ ಭ್ರಮೆಗೊಂಡಳು. ಕಲುಷಿತಗೊಂಡಿದ್ದ ಮನಃಸ್ಥಿತಿಯನ್ನು ಸಮತೋಲನಗೊಳಿಸಿಕೊಂಡು “ಈ ಬಾರಿ ಖಂಡಿತಾ ಮೋಸ ಹೋಗಲಾರೆ” ಎಂಬ ನಂಬಿಕೆಯನ್ನು ಧೃಡಪಡಿಸಿಕೊಂಡಳು.

ಡಾಕ್ಟರ್ ಜೊತೆಜೊತೆಗೆ ತಾನೂ ಆಪರೇಷನ್ ಹಾಲಿನೊಳಗೆ ನುಗ್ಗಿದ ಮಾದೇಶ ತಾಯಿಯೂ ಆಗಮಿಸುವುದಕ್ಕಾಗಿ ಕೊಣೆಯ ಎರಡೂ ಬಾಗಿಲುಗಳನ್ನು ಅಗಲಗೊಳಿಸಿದ. ಸೌಭಾಗ್ಯಳನ್ನು ಒಪ್ಪಿಸಲಿಕ್ಕಾಗಿಯೇ ಅವರು ಒಳ ಬಂದಾಗಿತ್ತು. ಡಾಕ್ಟರ್ ಹತ್ತಿರವಾಗುತ್ತಿದ್ದಂತೆಯೇ ಸೌಭಾಗ್ಯ ದೀನಳಾಗಿ ಕೈ ಮುಗಿದು, ಕಾಲುಗಳಿಗೂ ವಂದಿಸಲು ಮುಂದಾದಳು. ತಕ್ಷಣ ತನ್ನ ಹೆಜ್ಜೆಯನ್ನು ಹಿಂದಿಟ್ಟು ನಿಂತ ಡಾಕ್ಟರ್ “ಇವಳೊಬ್ಬ ಯಕಃಶ್ಚಿತ್ ಹೆಣ್ಣು’ ಎಂಬಂತೆ ನಿರುತ್ತರಳಾದಳು.

ಅತ್ತೆಯನ್ನು ನೋಡುವ ಮನಸ್ಸಿಲ್ಲದೆ, ಗಂಡನ ಮುಖವನ್ನೊಮ್ಮೆ ದಿಟ್ಟಿಸಿದಳು ಸೌಭಾಗ್ಯ. ಶಾಶ್ವತವಾಗಿ ಋಣವನ್ನು ಕಳೆದುಕೊಂಡಂಥ ಛಾಯೆ ಗೋಚರಿಸಿದಾಗ ಅವಳ ಜಂಘಾಬಲವೆಲ್ಲಾ ಜರ್ರನೆ ಇಳಿಯಿತು. “ಅಮ್ಮನ ಈ ಯೋಜನೆ ಸರಿ” ಎಂಬಂತೆ ನಿಂತಿದ್ದ ಆತನಿಗೆ ಏನೂ ಹೇಳಬೇಕೆನಿಸಲಿಲ್ಲ. ಕೊನೆಗೆ ಇವರೆಲ್ಲರನ್ನೂ ದಿಕ್ಕರಿಸಿ ನಿಲ್ಲುವುದೇ ಸರಿ ಎಂದು ತನ್ನ ಮನಸ್ಸಿನಲ್ಲೇ ದೈರ್ಯಮಾಡಿಕೊಂಡಳು. ಮಕ್ಕಳೊಡನೆ ಎಲ್ಲಿ, ಹೇಗಾದರೂ ಜೀವಿಸಿದರೂ ಸರಿ ಆದರೆ, ಇನ್ನೊಂದು ಕ್ಷಣ ಕೂಡ ಇಲ್ಲಿ, ಈ ಜನಗಳ ಜೊತೆ ಇರಲಾರೆನೆಂಬ ತನ್ನ ಅಚಲವಾದ ನಿರ್ಧಾರದಿಂದ ಹೊರನಡೆಯಲು ಮುಂದಾದ ಸೌಭಾಗ್ಯಳನ್ನು ಅತ್ತೆ ಹಿಡಿದೆಳೆದಳು. “ಸುಮ್ನೆ ಬಿದ್ಕೋತೀಯೋ ಇಲ್ವೋ?” ಎಂದೊಮ್ಮೆ ಹಾಸಿಯತ್ತ ದೂಕಿದಳು. ಡಾಕ್ಟರ್, ಮಾದೇಶ ಕೂಡ ಅವಳನ್ನು ಹಿಡೀಯಲು ಮುಂದಾದರು. ಮೂವರ ಹಿಡಿತದೊಳಗೂ ಮಿಸುಕಾಡಿ ದೇಹವನ್ನೊಮ್ಮೆ ಝಾಡಿಸಿ ಅಸಮ್ಮತಿಸಿದ ಸೌಭಾಗ್ಯಳ ಕಪೋಲಗಳಿಗೆ ಮಾದೇಶ “ಫಟಾರ್” ಎಂದು ಬಿಗಿದ. ನಿರ್ಭಾಗ್ಯೆ ಸೌಭಾಗ್ಯಳ ಜೊತೆಯುಲ್ಲೇ ಹೆಣ್ಣು ಬಸಿರೊಂದರ ಉಸಿರೂ ಆ ಕ್ಷಣವೇ ನಿಂತುಹೋಯಿತು.

೧೯-೦೮-೧೯೯೫

You may also like...

Leave a Reply