Kannada


ನನ್ನ ಅಚ್ಚುಮೆಚ್ಚಿನ ಕನ್ನಡ ವಿಭಾಗವಾದ್ದರಿಂದ ನನಗಿಲ್ಲಿ ನಾಲ್ಕು ಮಾತುಗಳನ್ನು ಬರೆಯಬೇಕೆನಿಸುತ್ತಿದೆ. ಪಿಯುಸಿ ದಿನಗಳಿಂದಲೇ ಕವಿತೆ ಬರೆಯಲು ಪ್ರಾರಂಭಿಸಿದ ನಾನು ಕನ್ನಡಧ್ಯಯನವನ್ನೇ ನನ್ನ ವಿದ್ಯಾಭ್ಯಾಸ ಜೀವನದ ಗುರಿಯಾಗಿರಿಸಿಕೊಳ್ಳಬೇಕಾಗಿತ್ತು ಎಂದು ಈಗಲೂ ಚಿಂತಿಸುತ್ತಿರುತ್ತೇನೆ. ಏಕೋ ಕನ್ನಡದ ಬಗ್ಗೆ ಅಪಾರ ಒಲವು. ಆ ಕಾರಣದಿಂದಲೇ ನಾನೂ ಕನ್ನಡದಲ್ಲಿ ಒಂದಷ್ಟು ಗೀಜಿದ್ದು. ಅಷ್ಟಕ್ಕೂ ನಾನೇನು ಮಹಾ ಕಾವ್ಯಗಳನ್ನಾಗಲೀ, ಮಹಾ ಮೇಧಾವಿಗಳ ಮಹಾನ್ ಕೃತಿಗಳನ್ನಾಗಲೀ ಅಥವಾ ಅಗಾಧವಾದ ಕನ್ನಡ ಸಾಹಿತ್ಯ ಸಂಪತ್ತಿನ ವಿಧ್ವತ್ತನ್ನು ಅತ್ಯಲ್ಪವೆನಿಸುವಷ್ಟನ್ನಾಗಲೀ ಓದಿ ಅರಗಿಸಿಕೊಂಡವನಲ್ಲ. ಆದರೂ “ನಾವೆಂಥ ಶ್ರೀಮಂತ ಭಾಷೆಯ ಉತ್ತರಾಧಿಕಾರಿಗಳು” ಎನ್ನುವ ಹೆಮ್ಮೆಯಲಿ ಸುಮ್ಮನಿರಲಾಗದೆ, ಮನಸ್ಸು ಮಾತನಾಡಿದ ಮಧುರವಾದ ಭಾವನೆಗಳನ್ನೆಲ್ಲಾ ಬರೆದುಕೊಳ್ಳಲೇ ಬೇಕಾಯಿತು. ಬರೆದಾದ ಮೇಲೆ ಬಹುದಿನಗಳಿಂದಲೂ ನನ್ನನ್ನೊಂದು ಬಯಕೆ ನಿರಂತರವಾಗಿ ಕಾಡುತ್ತಿತ್ತು. ಬರೆದದ್ದನ್ನೆಲ್ಲಾ ಸಂಗ್ರಹಿಸಬೇಕು, ಸಂಗ್ರಹಿಸಿದ್ದನ್ನೆಲ್ಲಾ ಹಂಚಿಕೊಳ್ಳಬೇಕು, ಹಂಚಿಕೊಂಡದ್ದನ್ನೆಲ್ಲಾ ಚರ್ಚಿಸಬೇಕು ಎಂದು ಮನಸ್ಸು ಎಡೆಬಿಡದೆ ಚಡಪಡಿಸುತ್ತಿತ್ತು. ಆದರೆ, ಏಕೋ ಸಮಯವೆಂಬುದು ನನ್ನನ್ನು ಬಿಟ್ಟುಕೊಟ್ಟಿರಲಿಲ್ಲ. ನಿತ್ಯ ಹೋರಾಟದಲ್ಲಿ ದಿನದ ಇಪ್ಪತ್ನಾಲ್ಕು ಗಂಟೆಗಳೂ ಹೇಗೋ, ಎಲ್ಲೋ ಅರಿವಿಗೆ ಬಾರದೆ ಹರಿದು ಹಂಚಿಹೋಗುತ್ತಿದ್ದವು. ಈಗ ಏಕೋ, ಎಲ್ಲಾ ಒಮ್ಮೆಲೆ ಒಟ್ಟಾಗಿ ನನ್ನನ್ನು ಎಡೆಬಿಡದೆ ಕಾಡಿದ್ದರಿಂದಲೋ ಅಥವಾ ಪ್ರಸವ ವೇದನೆಯಂತೆ ತಡೆಯಲಾಗದ ಸಂಕಟದ ಭಾದೆಯಿಂದಲೋ ಇನ್ನೂ ವಿಳಂಬಿಸುವುದು ಸರಿಯಿಲ್ಲವೆನಿಸಿ ಕೊನೆಗೂ ಶುರುಮಾಡಿದ್ದಾಯಿತು.

ಅದಿರಲಿ, ಇಲ್ಲಿ ನಾನು ಏನೇನೆಲ್ಲಾ ದಾಖಲಿಸಬಹುದು ಎಂದು ಸುಮಾರು ತಿಂಗಳುಗಳಾದರೂ ಯೋಚಿಸಿದ್ದೇನೆ. ಪ್ರತಿಸಾರಿ ಇದರ ಬಗ್ಗೆ ಯೋಚಿಸಿದಾಗಲೂ ನನಗೆ ವಿಧ-ವಿಧವಾದ ಮಾರ್ಗೋಪಾಯಗಳು ತಲೆಯೊಳಗೆ ಬಂದುಹೋಗುತ್ತಿದ್ದವು. ಅವೆಲ್ಲವನ್ನೂ ಇಲ್ಲಿ ದಾಖಲಿಸಿದರೆ ನೀವು ನಗದೆ ಇರಲಾರಿರಿ. ಸರಿ, ಅವೆಲ್ಲವನ್ನೂ ಅಲ್ಲೇ ತಡೆದು ಕೊನೆಗೆ ಹೌದು, ಇದುವರೆಗೂ ಕೃತಿಗಿಳಿಸಿರುವ ನನ್ನ ಕೆಲಸಗಳಿಂದಲೇ ಪ್ರಾರಂಭಿಸೋಣ, ನಂತರ ಕನ್ನಡ ಓದುಗರೇ ಇತ್ತೀಚೆಗೆ ಕಡಿಮೆಯಾಗುತ್ತಿರುವ ದಿನಗಳಲ್ಲಿ, ಅದರಲ್ಲೂ ಬರಹಗಾರರು ಕಾಣ ಸಿಗದಿರುವ ಈ ಅಪರೂಪದ ದಿನಗಳಲ್ಲಿ ಮುಂದೆ, ಅದು ಏನೇ ಆಗಿರಲಿ, ವಿಷಯ ಯಾವುದರ ಮೇಲಾದರೂ ಇರಲಿ ಆದರೆ, ಅವುಗಳನ್ನು ಸಹ್ಯ ಚೌಕಟ್ಟಿನೊಳಗೆ ಹಿಡಿದಿಟ್ಟು, ಪಂಡಿತರಾದಿಯಾಗಿ ಪಾಮರರವರೆಗೂ ಕಾಣಸಿಗುವ ಯಾವುದೇ ವರ್ಗದ ಜನಗಳನ್ನು ಮುಟ್ಟಬಲ್ಲಷ್ಟು ಸತ್ವಸಹಿತವಾಗಿ ಸೃಷ್ಟಿಸಲು ಸಾಧ್ಯವಿರುವ ಎಲ್ಲಾ ಕನ್ನಡಿಗರನ್ನು ಇಲ್ಲಿ ಒಟ್ಟಾಗಿ ಒಂದೆಡೆ ಸೇರಿಸಬೇಕು, ಕನ್ನಡ ಕೆಲಸ ಮಾಡಿ ತೋರಿಸಬಲ್ಲ ಪ್ರತಿಭಾವಂತರನ್ನೆಲ್ಲಾ ಒಗ್ಗೂಡಿಸಬೇಕು, ಸಮೃದ್ಧ ಕನ್ನಡನಾಡಿನ ಆಸೆ ಹೊತ್ತು ತಮ್ಮನ್ನು ತಾವೇ ಕನ್ನಡಕ್ಕರ್ಪಿಸಿಕೊಂಡು ನಮಗೆಲ್ಲಾ ಮಾದರಿಯಾಗಿರುವ ಮಹಾನುಭಾವರ ಕನಸುಗಳನ್ನು ಇಂದಿನ ಪೀಳಿಗೆಯವರಾದ ನಾವು ನಮ್ಮ ಮುಂದಿನ ಪೀಳಿಗೆಗೆ ತಲುಪಿಸುವಷ್ಟು ಕನಿಷ್ಟ ಕೆಲಸವನ್ನಾದರೂ ಮಾಡಬೇಕು ಎನ್ನುವ ಯೋಜನೆಯಿದೆ. ಕನ್ನಡಿಗರೆಲ್ಲರ ಭಾವಸ್ಪಂದನಕ್ಕೆ ಅವಕಾಶಮಾಡಿಕೊಡಬೇಕು ಎನ್ನುವ ಮಹದಾಸೆಯಿದೆ. ಮನಸ್ಸಿದೆ – ಸಿನಿ

“ಸಿದ್ದೇಗೌಡ ನಿಡಗಟ್ಟರು ಸಣ್ಣ ಸಣ್ಣ ಮಾತುಗಳಲ್ಲಿ ಸುಂದರವಾದ ಭಾವಗಳನ್ನು ಚಿತ್ರಿಸುತ್ತಾರೆ”

– ಕವಿ ಕೆ. ಎಸ್. ನರಸಿಂಹಸ್ವಾಮಿ, ತುಷಾರದಲ್ಲಿ