ಕನ್ನಡ ಸಾಹಿತ್ಯ ಸಮ್ಮೇಳನ – ಎತ್ತಿಗೆ ಜ್ವರ, ಎಮ್ಮೆಗೆ ಬರೆ


ಸಾಹಿತ್ಯಾಸಕ್ತರಿಗೆಲ್ಲಾ ನಿರಾಶೆ, ಕನ್ನಡ ಸಾಹಿತ್ಯ ಚಟವಟಿಕೆಗಳು ರಾಜಕೀಯಮಯವಾಗುತ್ತಿರುವ ಬಗ್ಗೆ ವಿಷಾದ, ಸಾಹಿತ್ಯ ಸಮ್ಮೇಳನಕ್ಕೂ, ಪಂಚಾಯ್ತಿ ಚುನಾವಣೆಗೂ ಎತ್ತಿಂದೆತ್ತಣ ಸಂಬಂಧವಯ್ಯಾ ಎಂಬ ಉಲ್ಲೇಖ ಹಾಗೂ ಉದ್ಗಾರ, ವಿನಾಕಾರಣ ರಾಜಕಾರಿಣಿಗಳು ಮೂಗು ತೂರಿಸುವುದರ ಬಗ್ಗೆ ಆಕ್ಷೇಪ. ಹೀಗೆ ಒಂದಲ್ಲ ನೂರಾರು ರೀತಿಯ ಪ್ರತಿಕ್ರಿಯೆಗಳು ೭೭ನೇ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮವನ್ನು ಪಂಚಾಯ್ತಿ ಚುನಾವಣೆಯ ಕಾರಣಗಳಿಂದಾಗಿ ಮುಂದೂಡುತ್ತಿರುವುದರ ಬಗ್ಗೆ ಸಾಹಿತ್ಯವಲಯಗಳಿಂದ ಕೇಳಿ ಬರುತ್ತಿವೆ. ಇದು ಸಹಜ. ನನ್ನನ್ನೂ ಸೇರಿಸಿಕೊಂಡು, ಕನ್ನಡ ಪ್ರೀತಿಸುವ ಎಲ್ಲರಿಗೂ, ಸಾಹಿತ್ಯದ ಗಂಧ-ಗಾಳಿಯೇ ಇಲ್ಲದ, ಅದೃಷ್ಟವಶಾತ್ ರಾಜಕಾರಿಣಿಯೋ, ಮಂತ್ರಿಯೋ ಆಗಿಹೋಗುವ ಕೆಲವೇ ಕೆಲವು ಅತಿ ಪ್ರತಿಷ್ಟೆಯ ಜನಗಳಿಗಾಗಿ, ಶ್ರೀಮಂತ ಭಾಷೆಯ ಚರಿತ್ರೆಹೊಂದಿರುವ, ವಿಶ್ವದ ಕೆಲವೇ ಕೆಲವು ಪುರಾತನ ಭಾಷೆಗಳಲ್ಲೊಂದಾದ, ಕೋಟ್ಯಾಂತರ ಜನ ಮನ ತಣಿಸಿ ನಾಡು-ನುಡಿಯಾಗಿರುವ ಕನ್ನಡದ ಸಾಹಿತ್ಯ ಜಾತ್ರೆಯನ್ನು ಮುಂದೂಡುವಂಥಹ ಬಹು ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳುತ್ತಿರುವ ಸರ್ಕಾರದ ವರ್ತನೆ ಮೂರ್ಖತನದ ಪರಮಾವಧಿ ಎಂದೆನಿಸುತ್ತದೆ. ಅಷ್ಟಕ್ಕೂ ಸಾಹಿತ್ಯ ಸಮ್ಮೇಳನಗಳಲ್ಲಿ ರಾಜಕಾರಿಣಿಗಳಿಗೇನು ಕೆಲಸ ಎಂದು ಅರ್ಥವಾಗುತ್ತಿಲ್ಲ. ಮೇಲಾಗಿ ಚುನಾವಣೆಯ ದಿನದಂದೇ ಸಾಹಿತ್ಯ ಸಮ್ಮೇಳನ ನಡೆಯುತ್ತಿಲ್ಲ. ಸರ್ಕಾರಕ್ಕೆ ಭಾಷಾಭಿಮಾನವಿದ್ದಿದ್ದರೆ, ಸಾಹಿತ್ಯ ಸಮ್ಮೇಳನದ ದಿನಾಂಕ, ಚುನಾವಣೆಯ ದಿನಾಂಕ ನಿಗದಿಯಾಗುವುದಕ್ಕೂ ಮೊದಲೇ ನಿರ್ಧಾರವಾಗಿದ್ದರಿಂದ ಚುನಾವಣ ಆಯೋಗಕ್ಕೆ ಕಾನೂನಿನ ಅಡಿಯಲ್ಲಿ ಮಾಡಬಹುದಾಗಿದ್ದ ಎಲ್ಲಾ ರೀತಿಯ ಮನವಿಗಳನ್ನೂ ಮಾಡಿ ಚುನಾವಣೆಯ ದಿನಾಂಕವನ್ನು ನಿಗದಿ ಪಡಿಸಬಹುದಾಗಿತ್ತು. ನಮ್ಮ ನಾಡಿನ, ನಾಡು ಭಾಷೆಯ ಹಿತಕ್ಕಿಂತ, ತಮ್ಮ ಪಕ್ಷಗಳ ಹಿತ ಕಾಯುವುದೇ ರಾಜಕೀಯ ಪಕ್ಷಗಳ ಪ್ರಮುಖ ಹೆಗ್ಗುರಿಯಾಗಿರುವಾಗ, ಕನ್ನಡ ಸಾಹಿತ್ಯ ಸಮ್ಮೇಳನದಂಥ ನಾಡಹಬ್ಬ ಅವರ ದೃಷ್ಟಿಯಲ್ಲಿ ಒಂದು ಯಕಃಶ್ಚಿತ್ ಕಾರ್ಯಕ್ರಮವಾಗಿದೆ. ಕನ್ನಡಿಗರು ಕೇವಲ ಮನುಷ್ಯರಾಗಿದ್ದಾರೆ. ಇಂಥಹ ಅವದೂತ ರಾಜಕಾರಿಣಿಗಳ ಮಧ್ಯೆ, ಈಗಾಗಲೇ ಜಾಗತೀಕರಣ, ಖಾಸಗೀಕರಣ ಎಂಬ ಭೂತಗಳ ಕಪಿಮುಷ್ಟಿಯಲ್ಲಿ ನಲುಗಿ ನರಳುತ್ತಿರುವ ಕನ್ನಡಮ್ಮನಿಗೆ, ಸುತ್ತುವರಿದು ಮುತ್ತಿಕೊಂಡಿರುವ ಸಂಕೋಲೆಗಳನ್ನು ಸಡಿಲಗೊಳಿಸುವ ಕಾರ್ಯಗಳೆಲ್ಲಿ ನಡೆದಾವು? ಜನರ ನಿರೀಕ್ಷೆಗಳೆಲ್ಲಿ ನೆರವೇರಾವು? ನಾವೆಲ್ಲ ಇಂಥಹ ಆಡಳಿತದೊಳಗೆ, ನಿರಾಕ್ಷೇಪರಾಗಿ ಬದುಕುತ್ತಿರುವಾಗ ನಮ್ಮತನವಾದರೂ, ಎಲ್ಲಿ ಉಳಿದೀತು? ಇವುಗಳನ್ನು ಗಂಭೀರವಾಗಿ ಚಿಂತಿಸಬೇಕಾಗಿದೆ.

ದೊಡ್ಡ ಕಾರ್ಯಕ್ರಮ. ಬೃಹತ್ ಶಾಮಿಯಾನ, ದೊಡ್ಡ-ದೊಡ್ಡ ಸಾಹಿತಿಗಳನ್ನು ಕಣ್ಣೆದುರು, ಕೈಯಳತೆಯಲ್ಲಿ ನೋಡಬಹುದಾದ, ಮಾತನಾಡಿಸಬಹುದಾದ ಸುವರ್ಣಾವಕಾಶ. ಎಲ್ಲೆಂದರಲ್ಲಿ ಕಾಣುವ ಕನ್ನಡ ಫಲಕಗಳು, ಎಲ್ಲಾ ಕಡೆಗಳಲ್ಲೂ ಕಾಣುವ ಕನ್ನಡ ಪುಸ್ತಕಗಳು, ಕನ್ನಡ ಭಾಷಣಗಳು, ವಾಚನಗಳು, ಮೆರವಣಿಗೆಗಳು ಹೀಗೇ ಒಂದೇ, ಎರಡೇ. ಇವಲ್ಲದೇ, ಬರೀ ಪತ್ರಗಳಲ್ಲಿ, ಫೋನಿನಲ್ಲಿ, ಈಮೇಲ್‍ಗಳಲ್ಲಿ ಮಾತ್ರ ಸಂಪರ್ಕಿಸಿದ್ದ ಸ್ನೇಹಿತರನ್ನೆಲ್ಲಾ ಖುದ್ಧಾಗಿ, ಕಣ್ಣಾರೆ ನೋಡುವ, ಹರಟುವ, ಜೊತೆಯಲ್ಲಿ ಕೂತು ಕಾಫಿ ಕುಡಿಯುವ, ತಿಂಡಿ ತಿನ್ನುವ, ಹೇಳಬೇಕೆಂದುಕೊಂಡಿದ್ದ ಭಾವನೆಗಳನ್ನೆಲ್ಲಾ ಹಂಚಿಕೊಂಡು ಹಗುರಮಾಡಿಕೊಳ್ಳುವ, ಸಾಹಿತ್ಯ ಚರ್ಚೆ ಮಾಡಿ ಜ್ಞಾನಾರ್ಜನೆಮಾಡಿಕೊಳ್ಳಬೇಕೆನ್ನುವ ಕನ್ನಡದ ಹಿರಿ-ಕಿರಿ ಸಾಹಿತಿಗಳ, ಕನ್ನಡಾಸಕ್ತರ ಮಹದಾಸೆಗಳೆಲ್ಲಾ ಮೇಳೈಸಿಕೊಂಡು, ಅದ್ಧೂರಿಯಾಗಿ ನಡೆಯಬೇಕಾಗಿರುವ ವಿಶ್ವ ಕನ್ನಡ ಸಮ್ಮೇಳನವನ್ನು ಏಕಾಏಕಿ ಕ್ಷುಲ್ಲಕ ಕಾರಣಗಳ ನೆಪ ಒಡ್ಡಿ ಬಹುಕೋಟಿ ಕನ್ನಡಿಗರಿಗೆಲ್ಲಾ ನಿರಾಶೆಯನ್ನುಂಟುಮಾಡುವ ನಿರ್ಧಾರವನ್ನು ತೆಗೆದುಕೊಳ್ಳುವ ಅಧಿಕಾರ ಸರ್ಕಾರಕ್ಕೆಲ್ಲಿದೆ ಎಂಬುದು ನನ್ನ ಪ್ರಶ್ನೆ. ಸರ್ಕಾರ ಎಂದರೆ ಜನ, ಜನತೆಯೇ ಸರ್ಕಾರವಾಗಿರುವಾಗ ಜನರ ಭಾವನೆಗಳಿಗೆ ಸ್ಪಂದಿಸದ ಸರ್ಕಾರಗಳಿದ್ದು ಏನು ಪ್ರಯೋಜನ?

ಆಶ್ಚರ್ಯವೆಂದರೆ, ಕನ್ನಡ ಸಾಹಿತ್ಯ ಪರಿಷತ್ತು, ಸಮ್ಮೇಳನ ದಿನವನ್ನು ನಿಗದಿಪಡಿಸಿ, ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆದು ತನ್ನ ದಿನಾಂಕವನ್ನು ಸಾರ್ವಜನಿಕರಿಗೆ ಪ್ರಕಟಿಸಿದ ನಂತರವೂ, ಸರ್ಕಾರದ ವರ್ತನೆಯನ್ನು ಖಂಡಿಸುವ ಧೈರ್ಯತೋರದಿದ್ದದ್ದು ಹಾಗೂ ಪ್ರಶ್ನಿಸದಿದ್ದದ್ದು. ಸರ್ಕಾರದ ಮರ್ಜಿಯಲ್ಲಿ ಬದುಕುತ್ತಿರುವಂತೆ ನಡೆದುಕೊಂಡು ತನ್ನ ನಿರಭಿಮಾನವನ್ನು ತೋರಿಸಿಕೊಂಡಿದ್ದು. ರಾಜಕಾರಿಣಿಗಳೇನೂ ತಮ್ಮಪ್ಪನ ಮನೆಯ ಆಸ್ತಿಯನ್ನು ತಂದು ಸಾಹಿತ್ಯ ಪರಿಷತ್ತಿಗೆ ಕೊಡುತ್ತಿಲ್ಲವೆಂಬುದನ್ನು ಅರಿತುಕೊಳ್ಳದಿದ್ದದ್ದು. ನಮ್ಮ ಹಣ, ನಮ್ಮ ಸಂಪತ್ತನ್ನು ನಮಗಾಗಿ ಕೊಡುವುದರಲ್ಲಿ ಸರ್ಕಾರದ ದೊಡ್ಡಸ್ತಿಕೆಯೇನೂ ಇಲ್ಲ ಎಂದುದನ್ನು ತಿಳಿದು, ಕಾರಣವನ್ನೇ ಕೇಳದೆ ಮೌನಕ್ಕೆ ಶರಣಾಗಿರುವುದು. ದಯಮಾಡಿ, ಇನ್ನಾದರೂ ಸರ್ಕಾರ ಹಾಗೂ ಪರಿಷತ್ತು ಕನ್ನಡಿಗರಿಗೆ ಭರವಸೆಗಳನ್ನು ಕೊಡುತ್ತ, ನಾಟಕದ ಮೊರೆಹೋಗದೇ, ವಾಸ್ತವಿಕತೆಯ ನೆಲೆಯಲ್ಲಿ, ನೈಜತೆಯಿಂದ ವರ್ತಿಸಿ ಎಲ್ಲರೂ ಮೆಚ್ಚುವಂತೆ ನಡೆದುಕೊಂಡು ಸಮಸ್ತ ಕನ್ನಡ ಕುಲಕೋಟಿಗೆ ಋಣಿಯಾಗಿರಲಿ.

೦೪-೧೨-೨೦೧೦

You may also like...

Leave a Reply