“ಬಂಗಾರ”ದ ಮನುಷ್ಯರಿಲ್ಲದೆ ಬರಿದಾದ ಕನ್ನಡ ಚಿತ್ರರಂಗ


“ಬಂಗಾರದ ಮನುಷ್ಯ”ನ ಕಾಲಾನಂತರ ಕನ್ನಡ ಚಿತ್ರರಂಗವೇಕೆ ತುಕ್ಕು ಹಿಡಿದ ಕಬ್ಬಿಣವಾಗಗಿಹೋಯಿತು? ಕಲಾತ್ಮಕ ಚಿತ್ರಗಳು ಹಿಂದಿನಷ್ಟು ಸಂಖ್ಯೆಯಲ್ಲಿ ಬರದಿದ್ದರೂ, ಬಂದಷ್ಟೂ ಒಂದಷ್ಟು ಹೆಸರುಮಾಡಿ ನಮ್ಮ ಮರ್ಯಾದೆ ಸಂಪೂರ್ಣವಾಗಿ ಹೋಗದಂತೆ ನೋಡಿಕೊಳ್ಳುತ್ತಿವ್ಯಾದರೂ ಬೇರೆ ಭಾಷೆಗಳ ಪ್ರಗತಿಯನ್ನು ಗಮನಿಸಿದಾಗ ನಮ್ಮ ಸಾಧವೆ ಏನೇನೂ ಸಾಲದೇನೋ ಅನ್ನಿಸುತ್ತದೆ. ಈ ಗುಂಪಿನ ಚಿತ್ರಗಳನ್ನು ಹೊರತುಪಡಿಸಿ ಕನ್ನಡ ಚಿತ್ರರಂಗದತ್ತ ಒಮ್ಮೆ ನೋಡಿದರೆ “ಥತ್! ಎಲ್ಲಿ ಹೋದವಾ ದಿನಗಳು?” ಎಂದೆನಿಸಿ ಬೇಸರವಾಗುತ್ತದೆ.

Dr. Rajkumar

ಮನೆಮಂದಿಯೆಲ್ಲಾ ಕೂತು ನೋಡುವಂಥ ಚಿತ್ರಗಳಂತೂ ಇಲ್ಲ. ಮನರಂಜನೆಯಂತೂ ಇಲ್ಲವೇ ಇಲ್ಲ. ಚಿತ್ರ ನಿರ್ಮಾಪಕನಿಗೆ ಚಿತ್ರವೊಂದರ ಗುಣಮಟ್ಟದ ಬಗ್ಗೆ ಇರಲೇಬೇಕಾದ ಕನಿಷ್ಟವೆನಿಸುವಷ್ಟಾದರೂ ಅರಿವಿಲ್ಲ, ಗಾಳಿ-ಗಂಧವಿಲ್ಲ, ಅಭಿರುಚಿಯಿಲ್ಲ. ನಿರ್ದೇಶಕರಲ್ಲಿ ಆಸ್ಥೆಯಿಲ್ಲ. ಒಳ್ಳೇ ಚಿತ್ರ ಕೊಡಬೇಕೆನ್ನುವ ಛಲವಿಲ್ಲ. ಚಿತ್ರಮಂದಿಯಲ್ಲಿ ನಿಯತ್ತಿಲ್ಲ. “ಹೌದು” ಎಂದರೆ “ಹೌದು”, “ಇಲ್ಲ” ಎಂದರೆ “ಇಲ್ಲ” ಎನ್ನುವ ಮಾಧ್ಯಮವಾಗಿದು ಉಳಿದಿಲ್ಲ. ಇಲ್ಲೇನಿದ್ದರೂ “ಹೌದು” ಎಂದರೆ “ಇಲ್ಲ”, “ಇಲ್ಲ” ಎಂದರೆ “ಇಲ್ಲವೇ ಇಲ್ಲ” ಎಂಬಂತಾಗಿದೆ. ಮುಖ್ಯವಾಗಿ ಇತ್ತೀಚಿನ ಕಚಡ ಎಂದೇ ಕರೆಯಬಹುದಾದ ಚಿತ್ರಗಳನ್ನು ನೋಡಿ ಆನಂದಿಸುತ್ತಿರುವ ಪ್ರೇಕ್ಷಕನಿಗೆ ಗತಿಯಿಲ್ಲ. ಇಂಥಹ ಅತಿರಥ-ಮಹಾರಥರನ್ನು ಮಹಾನುಭಾವರೆಂದು ಆಹ್ವಾನಿಸಿ ಕಾರ್ಯಕ್ರಮ ನಡೆಸಿಕೊಂಡು, ಕಾರ್ಯಸಾಧನೆ ಮಾಡಿ ಮಹದುಪಕಾರವನ್ನೂ, ಮಹಾ ಸುಧಾರಣೆಯನ್ನೂ ಮಾಡಿದವರಂತೆ ಮಾತನಾಡಿಕೊಂಡು ತಿರುಗಾಡುತ್ತಿರುವ ಮಹತ್ಕಾರ್ಯಕರ್ತರಿಗೆ ಮಾಡಲು ಕೆಲಸವಿಲ್ಲ. ಜೊತೆಗೆ ಬುದ್ಧಿಯಿಲ್ಲ.

ಕನ್ನಡ ಚಿತ್ರಲೋಕದ ಹೆಗ್ಗುರುತುಗಳಾಗಿ ಹೆಗ್ಗಳಿಕೆಯಿಂದ ಬೀಗುತ್ತಿದ್ದ ಪ್ರಸಿದ್ಧ ಚಿತ್ರ ತಯಾರಿಕಾ ಸಂಸ್ಥೆಗಳೆಲ್ಲಾ ಇಂದು ಮುಚ್ಚಿಹೋಗಿವೆ. ಯಾವುದೋ ಲೂಟಿ ಉದ್ದಿಮೆಗಳಿಂದ ಹೇಗೋ ಹಣ ಮಾಡಿದವರೆಲ್ಲಾ ಇಲ್ಲಿ ಲಗ್ಗೆ ಇಟ್ಟಿದ್ದಾರೆ. ಹೊಸಬರ ದಾಳಿಯಾಗಿದೆಯೇ ಹೊರತು ಹೊಸತನದ ದಾಳಿಯಾಗಿಲ್ಲ. ಇತ್ತೀಚಿನ ಕಲಾವಿದರಲ್ಲಿ ಶ್ರದ್ಧೆ ಹಾಗೂ ಪ್ರತಿಭೆಯಿಲ್ಲ. ಅಳುದುಳಿದ ಹಿರಿಯ ಕಲಾವಿದರಿಗಿಲ್ಲಿ ಅವಕಾಶವಾಗಲೀ, ಗೌರವವಾಗಲೀ ಉಳಿದಿಲ್ಲ.  ಒಟ್ಟಾರೆ ಇಲ್ಲಿ ಯಾವುದೂ ಇಲ್ಲ. ಆದರೂ ಚಿತ್ರರಂಗವೆಂಬುದೊಂದು ಮಾತ್ರ ಇದೆ.

ಇದು ಒಂದಲ್ಲ ಚಿತ್ರರಂಗದ ಯಾವ ಕ್ಷೇತ್ರ ಅಥವಾ ವಿಷಯಕ್ಕೆ ಬಂದರೂ ಇದೇ ಗತಿಯಾಗಿಹೋಗಿರುವುದು ಬೇಸರದ ಸಂಗತಿ. ಕೇವಲ ಹಾಡುಗಳ ವಿಷಯವನ್ನೇ ಉದಾಹರಣೆಯಾಗಿ ನೋಡೋಣ. ಅಸಹ್ಯದ ಅತಿರೇಕ ಎಂದು ಯಾವುದಕ್ಕಾದರೂ ಫಟ್ಟನೆ ಹೇಳಬಹುದಾದರೆ ಅದು ಇತ್ತೀಚೆಗೆ ಬರುತ್ತಿರುವ ಕೆಲವು ಕನ್ನಡ ಹಾಡುಗಳಿಗೆ. ನನಗೊಬ್ಬ ನಿರ್ದೇಶಕ ಮಹಾಶಯ ಕೇಳಿದ. ಹಾಡು ಬರೆಯಲೂ ಹೇಳಿದ. ಅದರ ಜೊತೆಗೆ ಹಾಡು ಹೀಗೇ ಇರಬೇಕು. ಪದಗಳು ಇಂಥವೇ ಇರಬೇಕು ಎಂಬಿತ್ಯಾದಿ ಷರತ್ತುಗಳನ್ನು ಶುರುಮಾಡಿದ. ತಕ್ಷಣ ನಾನವನಿಗೆ ನೀನು ಹೇಳಿದ ರೀತಿಯ ಹಾಡನ್ನು ಬರೆಯುವ ಮನಸ್ಸಿಲ್ಲ. ಅದು ನನ್ನ ಕೆಲಸವೂ ಅಲ್ಲ ಜೊತೆಗೆ ಸಮಯವೂ ಇಲ್ಲ. ದಯಮಾಡಿ ಅಂಥಹ ಹಾಡನ್ನು ನೀನು ಬರೆಯುವುದೇ ಸರಿ ಎಂದು ಹೇಳುತ್ತಿದ್ದಂತೇ ಆತನಿಗೊಂದು ರೀತಿಯ ಅಪರಾಧಿ ಮನೋಭಾವನೆ ಕಾಡಿದ್ದರಿಂದಲೋ ಏನೋ “ಇಲ್ಲಾ ಸಾರ್ ಅದು…” ಎಂದೇನೇನೋ ಹೇಳತೊಡಗಿದ.

ಇಂಥಹ ಭಾಷಾಜ್ಞಾನವೇ ಇಲ್ಲದ, ಭಾಷೆಯೂ ಬಾರದ ನಿರ್ದೇಶಕರನ್ನು ಎಲ್ಲಿಂದಲೋ ಕರೆತಂದು, ಕನ್ನಡಿಗರಿಗೂ ಅನ್ಯಾಯಮಾಡಿಕೊಂಡು, ಕನ್ನಡ ಚಿತ್ರಮಾಡಿಸುತ್ತಿರುವುದಲ್ಲದೇ, ಅದರಿಂದ ಕೋಟಿ-ಕೋಟೀ ಲಾಭ ಗಳಿಸುವ ನಿರೀಕ್ಷೆಯಿಟ್ಟುಕೊಂಡು ಕೊನೆಗೆ ನಿರಾಶೆಯ ನಿಟ್ಟುಸಿರಿಡುತ್ತಿರುವ ಕೆಲವು ನಿರ್ಮಾಪಕರನ್ನು ನೋಡಿ ನನಗೆ ಅಯ್ಯೋ ಪಾಪ! ಅನ್ನಿಸುತ್ತದೆ. ಇಂದಿಗೂ ನವನವೀನವೆನಿಸುವಂತಿರುವ ನಮ್ಮ ಉದಯಶಂಕರರ “ಆಡಿಸಿ ನೋಡು ಬೀಳಿಸಿ ನೋಡು…” ಜಯಗೋಪಾಲರ “ಹೂವು ಚೆಲುವೆಲ್ಲಾ ನಂದೆಂದಿತು…” ಎನ್ನುವ ಚೆಲುವಾದ ಹಾಡುಗಳಾಗಲೀ, ವಿಜಯನಾರಸಿಂಹರು ಬರೆದ “ವಂಸಂತ ಬರೆದನು ಒಲವಿನ ಓಲೆ….” ದೊಡ್ಡರಂಗೇಗೌಡರು ನಿದ್ದೆಗೆಡಿಸಿದ “ನಿನ್ನಾ ರೂಪು ಎದೆಯಾ ಕಲಕಿ…” ಎನ್ನುವ ಹೃದಯ ಕಲಕುವ ಪ್ರೇಮ ಗೀತೆಗಳಾಗಲೀ,  ಹುಣಸೂರರ “ಹರಿನಾಮವೇ ಚೆಂದ…” ಕಣಗಾಲರ “ಜನ್ಮ ಜನ್ಮದ ಅನುಬಂಧಾ…” ಎನ್ನುವ ಚೆಂದದ, ಸುಮಧುರ, ಸುಶ್ರಾವ್ಯ ಸಂಗೀತ ರಸಧಾರ ರಾಗಗಳೆಲ್ಲಿ ಮರೆಯಾಗಿಹೋದವು ಎಂದು ಸಂಕಟವಾಗುತ್ತದೆ.

“ಬಂಗಾರದ ಮನುಷ್ಯ”, “ಚೋಮನ ದುಡಿ” “ನಾಗರ ಹಾವು” “ಸ್ಕೂಲ್ ಮಾಸ್ಟರ್” ನಂಥಹ ಚಿತ್ರರತ್ನಗಳೆಲ್ಲಿ ಕಾಣೆಯಾದವೆನಿಸುತ್ತದೆ. ರಾಜಣ್ಣ, ಬಾಲಣ್ಣ, ಪುಟ್ಟಣ್ಣ … ನವರಂಥ ಪ್ರತಿಭಾವಂತರೇಕೆ ಕಣ್ಮರೆಯಾಗಿ ಹೋದರೋ ಎಂದೆನಿಸಿ ವೇದನೆಯಾಗುತ್ತದೆ.

೧೪-೧೨-೨೦೦೯

You may also like...

Leave a Reply