ಹಂಸಲೇಖಾರ ದೇಸಿಲೋಕದೊಳಗೊಂದು ಸುತ್ತು


ಕನ್ನಡ ಚಿತ್ರಜಗತ್ತಿನ ಪುಟಗಳಲ್ಲಿ ಬಹು ಮುಖ್ಯವಾಗಿ ಕಾಣಬಹುದಾದ ಕೆಲವೇ ಕೆಲವು ವ್ಯಕ್ತಿಗಳ ಸಾಲಿನಲ್ಲಿ ಹಂಸಲೇಖಾರ ಹೆಸರೂ ಒಂದು. ಹಂಸಲೇಖಾರ ಹೆಸರು ಹಲವಾರು ಕಾರಣಗಳಿಂದಾಗಿ ಪ್ರಸಿದ್ಧಿ. ಬಾಲು, ಮಾಲು ಎಂದು ಹಾಡು ಬರೆದು ಹರೆಯದ ಹುಡುಗ-ಹುಡುಗಿಯರ ಯೌವ್ವನದ ಕಿಚ್ಚಿನ ಬುಡಕ್ಕೇ ಬೆಂಕಿ ಹಚ್ಚಿದ್ದಕ್ಕಾಗಿ, ಆ ವರ್ಗದ ಒಂದು ಗುಂಪಿಗೆ ಅವರು ಪ್ರೀತಿ. ನಂತರದ ದಿನಗಳಲ್ಲಿ ರವಿಚಂದ್ರನ್-ಹಂಸಲೇಖಾ ಅವರ ಜೊಡಿಯಲ್ಲಿ ಬಂದ ಅನೇಕ ಚಿತ್ರಗಳಲ್ಲಿನ ಅವರ ಸೊಗಸಾದ ಸಾಹಿತ್ಯ, ಸಂಗೀತ ಹಾಗೂ ಸಂಭಾಷಣೆಗಳಿಂದ ಪುಳಕಿತರಾದ ಅಭಿಮಾನಿ ಬಳಗಕ್ಕೆ ಅವರೆಂದರೆ ಪ್ರೀತಿ. ಸಾಹಿತ್ಯ ಸಂಗೀತ ಎರಡರಲ್ಲೂ ತಮ್ಮ ಪ್ರಭುತ್ವ ಸಾಧಿಸಿಕೊಳ್ಳುತ್ತಾ, ಜೊತೆಗೆ ತಮ್ಮ ಪ್ರತಿಭೆಯನ್ನೂ ಇನ್ನಷ್ಟು ಪಕ್ವಗೊಳಿಸಿಕೊಳ್ಳುತ್ತಾ ಪಂಚಾಕ್ಷರೀ ಗವಾಯಿ, ದಾನಮ್ಮ ದೇವಿ, ಮುತ್ತಿನ ಹಾರ, ಆಕಸ್ಮಿಕ … ಮುಂತಾದ ಚಿತ್ರಗಳಲ್ಲಿ ತಮ್ಮ ಸಾಮರ್ಥ್ಯವೇನೆಂಬುದನ್ನು ಸಾಬೀತು ಮಾಡಿದ್ದರಿಂದ, ಪ್ರಬುದ್ಧರು, ಬುದ್ಧಿಜೀವಿಗಳಾದಿಯಾಗಿ ಹಿಡಿದು, ಎಲ್ಲಾ ಸಂಗೀತ ರಸಿಕರಿಗೂ ಕೂಡ ಹಂಸಲೇಖಾ ಎಂದರೆ ಅಷ್ಟೇ ಪ್ರೀತಿ. ಹೊಸದನ್ನು ಹುಟ್ಟುಹಾಕುವುದರಲ್ಲಿ, ಹೊಸಬರನ್ನು ಪ್ರೋತ್ಸಾಹಿಸುವುದಲ್ಲಿ ಅವರು ಎಂದೂ ನಿಸ್ಸೀಮರೆಂದೇ, ಅನೇಕಾನೇಕ ನಿರ್ದೇಶಕ, ನಿರ್ಮಾಪಕ, ಗಾಯಕ, ಗಾಯಕಿ, ಹೊಸ ತಲೆಮಾರಿನ ಸಂಗೀತ ನಿರ್ದೇಶಕ ಮುಂತಾದವರಿಗೆಲ್ಲಾ ಅವರೆಂದರೆ ಎಲ್ಲಿಲ್ಲದ ಪ್ರೀತಿ. ಒಟ್ಟಾರೆ ಅವರನ್ನು ಪ್ರೀತಿಯಿಂದ ನೋಡದವರನ್ನೂ, ಇಷ್ಟಪಡದವರನ್ನೂ ಕಾಣುವುದು ತುಂಬಾ ಕಷ್ಟ.

Myself with Hamsalekha

ಕನ್ನಡ ಚಿತ್ರರಸಿಕರಿಗೆ ಅದುವರೆಗೂ ಕೇಳಿದ್ದನ್ನೇ ಕೇಳಿ, ನೋಡಿದ್ದನ್ನೇ ನೋಡಿ ಬೇಸತ್ತು, ಕನ್ನಡ ಚಲನ ಚಿತ್ರಗಳ ಬಗ್ಗೆ ನಿರಾಸಕ್ತಿ ಹೊಂದಿದ್ದ ವೀಕ್ಷಕ ಹೊಸದರ ನಿರೀಕ್ಷೆಯಲ್ಲಿದ್ದಾಗ, ಅದುವರೆಗೂ ಹಲವಾರು ವರ್ಷಗಳನ್ನು ಸವೆಸಿ, ಹೆಸರಿಲ್ಲದೆ ದುಡಿದು, ಪ್ರತಿಭೆಯಿದ್ದೂ ದಣಿದು, ನಾಟಕ, ನೃತ್ಯ, ಜಾನಪದ ಹೀಗೇ ಹಲವಾರು ಸಾಂಸೃತಿಕ ಕ್ಷೇತ್ರಗಳಲ್ಲಿ ಪಾಂಡಿತ್ಯವಿದ್ದೂ ಪಂಡಿತರ ಕಣ್ಣಿಗೆ ಕಾಣದಿದ್ದ “ಗಂಗರಾಜು” ಎಂಬ ಯುವ ಪ್ರತಿಭೆ, “ಹಂಸಲೇಖಾ” ಎಂಬ ಹೆಸರಿನಲ್ಲಿ ದಿಢೀರನೆ ಪ್ರತ್ಯಕ್ಷವಾದಗ ಇಡೀ ಚಿತ್ರಲೋಕವೇ “ಯಾರೀತ?” ಎನ್ನುವಂತೆ ಬೆರಗಾಗಿ ನೋಡತೊಡಗಿದರು. ಅವರ ಸಖ್ಯ, ಒಡನಾಟಕ್ಕಾಗಿ ಮುಗಿಬಿದ್ದರು. ಸಾಲು ಸಾಲು ಚಿತ್ರಗಳನ್ನು ಕೈಯಲ್ಲಿಡಿದು ಸಾಲಾಗಿ ನಿಂತರು. ಅವರೆಲ್ಲಾ ಆಸೆ, ನಿರೀಕ್ಷೆಗಳನ್ನು ಹುಸಿಮಾಡದೇ, ಹದಿ ಹರೆಯದ ಯುವಕ ಯುವತಿಯರ ಎದೆ ಬಡಿತದ ವೇಗವನ್ನು ಬಹು ಬೇಗ ಅರ್ಥಮಾಡಿಕೊಳ್ಳಬಲ್ಲಷ್ಟು ಜಾಣರಾಗಿದ್ದ ಹಂಸಲೇಖಾ, ಎಲ್ಲರ ನಾಡಿ ಮಿಡಿತದ ತಾಳಕ್ಕೆ ತಾಳೆಯಾಗತಕ್ಕ ಹಾಡುಗಳನ್ನು ರಚಿಸಿ ಸೈ ಎನಿಸಿಕೊಳ್ಳತೊಡಗಿದರು. ಹಲವಾರು ವರ್ಷಗಳ ಕಾಲ ಏಕಮೇವಾದ್ವಿತೀಯರಾಗಿ ಚಿತ್ರ ಸಂಗೀತಲೋಕವನ್ನು ಆಳಿದರು. ಅವರ ಆಳ್ವಿಕೆಯ ಅವಧಿಯಲ್ಲಿ ಬಂದ ಹಾಡುಗಳು, ಟ್ಯೂನ್‍ಗಳು, ಸಾಹಿತ್ಯದ ಸಾಲುಗಳು ಎಲ್ಲಾ ವರ್ಗದ ಜನರನ್ನೂ ಅದೆಷ್ಟು ಆಕರ್ಷಿಸಿಸಿದ್ದವೆಂದು ಎಲ್ಲರಿಗೂ ಗೊತ್ತು. ಸಂಗೀತರಸಿಕರ ಹೃದಯಕ್ಕೇ ಲಗ್ಗೆ ಹಾಕಿ, ಕುಂತಲ್ಲಿ, ನಿಂತಲ್ಲಿ ಎಲ್ಲರ ಬಾಯಲ್ಲೂ ಅವರ ಹಾಡುಗಳು ಇಂದಿಗೂ ಗುನುಗಾಡುತ್ತವೆಂದರೆ, ಅವುಗಳ ಗಟ್ಟಿತನವೇನೆಂಬುದು ಯಾರಿಗಾದರೂ ಅರ್ಥವಾಗುತ್ತದೆ. ಹಲವಾರು ಚಿತ್ರ ಸಾಹಿತಿಗಳು, ಸಂಗೀತ ನಿರ್ದೇಶಕರು ಇವರನ್ನನುಸರಿಸತೊಡಗಿ ಎಡವಿದ್ದು ಒಂದು ಇತಿಹಾಸ. ಇಡೀ ಚಿತ್ರಮಾಧ್ಯಮದ ಚಿತ್ರಣವನ್ನೇ ವರ್ಣಮಯವಾಗಿಸಿ, ಕನ್ನಡ ಚಿತ್ರ ಪ್ರಪಂಚದ ಪುಟ ಪುಟಗಳನ್ನೂ ಚಿತ್ತಾರಗಳಿಂದಲಂಕರಿಸಿ, ಶಾಶ್ವತ ಸ್ಥಾನಗಳಿಸಿಕೊಂಡ ಸಂಗೀತ ದಿಗ್ಗಜ ಈ ಹಂಸಲೇಖಾ. ಮಾತಾಡಿದ್ದನ್ನೇ ಹಾಡು ಮಾಡಿ ತೋರಿಸಬಲ್ಲಂಥಹ ಅವರ ಮಾಂತ್ರಿಕ ಶಕ್ತಿಗೆ ಬೆರಗಾಗಿಹೋದವರೆಷ್ಟೋ. ಕುಂತಲ್ಲೇ ಹಾಡು ಬರೆಯುವುದಾಗಲೀ, ನಿರ್ದೇಶಕರ ನೋಟದಲ್ಲೇ, ಅವರ ನಿರೀಕ್ಷೆಯೇನೆಂಬುದನ್ನು ಅರ್ಥಮಾಡಿಕೊಳ್ಳುವುದರಲ್ಲಿ ಅವರದು ಎತ್ತಿದ ಕೈ. ಹಂಸಲೇಖಾರ ಸಂಗೀತ ಸಾರಥ್ಯದಲ್ಲಿ ಬಂದ ಚಿತ್ರಗಳು, ಹಾಕಿದ ಬಂಡವಾಳಕ್ಕೆ ಮೋಸ ಮಾಡದಂತೆ, ನಿರ್ಮಾಪಕ ನಿಟ್ಟುಸಿರಿಡದಂತೆ, ಹಣವನ್ನು ಕೊಳ್ಳೆಮಾಡುತ್ತಿದ್ದದ್ದು ಅವರೇನೆಂದು ಹೇಳುತ್ತದೆ. ಹಂಸಲೇಖಾ ಎಂದರೆ ಸಂಗೀತ, ಸಂಗೀತ ಎಂದರೆ ಹಂಸಲೇಖಾ ಎನ್ನುವ ಟ್ರೆಂಡ್ ಗಟ್ಟಿಯಾಗಿ ಇಂದಿಗೂ ಚಿತ್ರರಂಗದಲ್ಲಿದೆಯೆಂದರೆ, ಅವರ ಅಗತ್ಯತೆ ಎಷ್ಟಿದೆ ಎಂದು ತಿಳಿಯುತ್ತದೆ. ಇಂಥಹ ಹಂಸಲೇಖಾ ಇಷ್ಟೆಲ್ಲಾ ಆಗಿ ಹೋದದ್ದು ಯಾರದೋ ದಯೆಯಿಂದಾಗಿಯೋ ಅಥವಾ ಆಕಸ್ಮಿಕವಾದ ಅದೃಷ್ಟದಿಂದಲೋ ಅಲ್ಲ. ಕೇವಲ ಅವರ ಪ್ರತಿಭೆಯಿಂದ, ಸ್ವಶಕ್ತಿಯಿಂದ. ಯಾರಿಗಾದರೂ ಸರಿ, ಅವರ ತಪ್ಪುಗಳನ್ನು ತಿದ್ದಿ ಬುದ್ಧಿ ಹೇಳಬಲ್ಲಷ್ಟು ಜಾಣರಾಗಿದ್ದರಿಂದ. ಅವರ ಗರಡಿಯಲ್ಲಿ ಪಳಗಿದ ಶಿಷ್ಯಂದಿರ ಒಂದು ದೊಡ್ಡ ತಂಡವೇ ಇಂದು ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದೆ ಎಂದರೆ, ಅವರ ಪ್ರತಿಭಾ ಸಾಮರ್ಥ್ಯದ ಅರಿವು ನಮಗಾದೀತು.

ಕನ್ನಡದಂಥಹ ಸೀಮಿತ ಚೌಕಟ್ಟಿನಲ್ಲೇ ಇದ್ದು, ಬರೀ ಕನ್ನಡವಷ್ಟೇ ಅಲ್ಲ, ದೇಶದ ಯಾವುದೇ ಭಾಷೆಯ, ಯಾವುದೇ ರಾಜ್ಯದ ಸಂಗೀತ ನಿರ್ದೇಶಕನೂ ಮಾಡದ ಸಾಧನೆಯನ್ನು ಅವರು ಮಾಡಿದ್ದಾರೆ ಎನ್ನುವ ಸತ್ಯ ಅನೇಕರಿಗೆ ತಿಳಿದಿಲ್ಲ. ಸಾಹಿತ್ಯ ಹಾಗೂ ಸಂಗೀತ ಎರಡನ್ನೂ ನೀಡಿ, ಇದುವರೆಗೂ ಅವರು ರಚಿಸಿರುವ ಹಾಡುಗಳ ಸಂಖ್ಯೆ ಐದು ಸಾವಿರದ ಗಡಿಯನ್ನು ಮುಟ್ಟುತ್ತಿದೆ. ಆ ಐದೂ ಸಾವಿರ ಹಾಡುಗಳಲ್ಲಿ, ಶೇಕಡಾ ತೊಂಬತ್ತಕ್ಕೂ ಹೆಚ್ಚಿನ ಹಾಡುಗಳು ಜನರ ಮನಸೂರೆ ಮಾಡಿಬಿಟ್ಟಿವೆ. ಎಂದೂ ಮರೆಯಲಾಗದಂತೆ ಹೃದಯದೊಳಗೆ ನೆಟ್ಟಿವೆ. ಅವುಗಳ ಪಟ್ಟಿ ಮಾಡ ಹೊರಟರೆ ಇಲ್ಲಿ, ದಿನವಾದೀತು. ಬೇರೆ ಯಾವುದೇ ಭಾಷೆಗಳಲ್ಲಿ ನೋಡಿದರೂ ಐದಲ್ಲ, ಕೇವಲ ಒಂದು ಸಾವಿದರ ಹತ್ತಿರವನ್ನೂ ಯಾರೂ ಇದುವರೆಗೆ ಮುಟ್ಟಿಲ್ಲ. ಅಂದಮೇಲೆ, ನಾನೇನೂ ಹೇಳಬಯಸುವುದಿಲ್ಲ. ನೀವೇ ಊಹಿಸಿ.

ಇಂಥಹ ಹಂಸಲೇಖಾರನ್ನು ನಾನು ತುಂಬಾ ಹತ್ತಿರದಿಂದ ಬಲ್ಲವನಾದ್ದರಿಂದ, ಅತೀ ಸಲಿಗೆಯಿಂದ ನೋಡಿದವನಾದ್ದರಿಂದ, ಅವರಲ್ಲಿ ಈ ಮೇಲಿನ ಎಲ್ಲಾ ವಿಷಯಗಳನ್ನು ಬಿಟ್ಟು ಬೇರೇನನ್ನಾದರೂ ನೋಡಿದ್ದೇನೆಯೇ? ಅಥವಾ ಬೇರೇನ್ನನ್ನಾದರೂ ಅವರು ಮಾಡಬಲ್ಲವರಾಗಿದ್ದಾರೆಯೇ? ಇಲ್ಲವೇ ಮಾಡುತ್ತಿದ್ದಾರೆಯೇ? ಅದೂ ಬೇಡ, ನಾನಿಲ್ಲಿ ಅವರ ಬಗ್ಗೆ ಬೇರೆನ್ನನಾದರೂ ಹೇಳ ಹೊರಟಿದ್ದೇನೆಯೇ? ಎಂಬಿತ್ಯಾದಿ ಪ್ರಶ್ನೆಗಳು ಇಷ್ಟರಲ್ಲೇ ನಿಮ್ಮಲ್ಲಿ ಮೂಡಿವೆ ಎಂದು ನನಗೆ ಗೊತ್ತಿದೆ. ಈ ನಿಮ್ಮ ಪ್ರಶ್ನೆಗಳಿಗೆಲ್ಲಾ ನಾನು ಉತ್ತರಿಸುವ ಮೊದಲು, ನಾನೂ ಅವರಲ್ಲಿ ಏನೆಲ್ಲಾ ಮೆಚ್ಚಿದ್ದೇನೆ, ಒಬ್ಬ ಅಭಿಮಾನಿಯಾಗಿ, ಸಂಗೀತ ಪ್ರಿಯನಾಗಿ, ಸಾಹಿತ್ಯ ರಸಿಕನಾಗಿ, ಆತ್ಮೀಯನಾಗಿ, ಸ್ನೇಹಿತನಾಗಿ ಎಂದು ಮೊದಲು ಹೇಳ ಬಯಸುತ್ತೇನೆ.

ಹಂಸಲೇಖಾರನ್ನು ಮೆಚ್ಚುವ ಕನ್ನಡ ಚಿತ್ರಪ್ರೇಮಿಗಳಲ್ಲಿ ನಾನೂ ಒಬ್ಬ. ಅವರ ಹಲವಾರು ಹಾಡುಗಳು ಇಂದಿಗೂ ನನ್ನನ್ನು ಕಾಡುತ್ತವೆ. ಅರಿವಿಗೂ ಬರದೇ ನನ್ನ ಕರಾಳವಾದ ಕೊರಳಿನಿಂದ ಆಗಾಗ್ಗೆ ಹೊರಬರುತ್ತಿರುತ್ತವೆ. “ಬೆಳದಿಂಗಳು ಸಹ ಸೋಕದ ಮನಸಿದು, ನಿನಗಾಗಿರಿಸಿರುವೆ”, “ನನ್ನ ತೋಳಿನಲ್ಲಿ ನೀನು ಇದ್ದ ಮೇಲೆ ಭೂಮಿ ಬಿರಿಯಲಿ”, “ಹಾಡಾಗಲೀ, ನಾಡಗಲೀ, ಗೂಡಾಗಲೀ, ಕಟ್ಟೋಕೆ ನಾನಾ ದಿನ, ಕೆಡವೋಕೇ ಮೂರೇ ದಿನ”, “ಬಾಳ ಕದನದಲ್ಲಿ ಭರವಸೆಗಳು ಬೇಕು, ನಾಳೆ ನನ್ನದೆನ್ನುವ ನಂಬಿಕೆಗಳು ಬೇಕು”, “ನಿಂತಾಗ ಬುಗುರಿಯ ಆಟ, ಎಲ್ಲಾರೂ ಒಂದೇ ಓಟ”, “ಈ ಉದರಕ್ಕಾಗಿ, ಈ ಅಧರಕೆ ಕಹಿ ಚುಂಬನಾ”, “ಕೊಡಗಿನ ಹೆಣ್ಣು ಹೆತ್ತರೆ ಸ್ವರ್ಗ, ಯುದ್ಧದೇ ಗಂಡು ಸತ್ತರೆ ಸ್ವರ್ಗ” “ಒಂದೊಂದೂ ಪತ್ರವೂ, ಪ್ರೇಮದಾ ಗ್ರಂಥವು, ಅಕ್ಷರಕ್ಕೆ ಯಾರು ಈ ಮಾಯಾಶಕ್ತಿ ತಂದರು” ಮುಂತಾದ ಸಾಲುಗಳು ಸಾಹಿತ್ಯಾಸಕ್ತನಾದ ನನ್ನನ್ನು ಚಿಂತಿಸುವಂತೆ ಮಾಡುತ್ತವೆ. ಸಂದರ್ಭಕ್ಕೆ ಹಾಡು ಬರೆಯುವ ಕಲೆಯನ್ನು ಕನ್ನಡ ಚಿತ್ರರಂಗದಲ್ಲಿ ಸಿದ್ಧಿಸಿಕೊಂಡವರಲ್ಲಿ “ಉದಯಶಂಕರ್” ಬಿಟ್ಟರೆ “ಹಂಸಲೇಖಾ” ಅವರೊಬ್ಬರೇ. “ಅನಾಥ ಮಗುವಾದೆ”, “ತಾಯೀ ತಾಯೀ” “ಮೀಸೆ ಹೊತ್ತ ಗಂಡಸಿಗೆ”, “ನೋಡಮ್ಮಾ ಹುಡುಗಿ” “ಬಾಳುವಂಥ ಹೂವೇ” ಕೆಲವು ಉದಾಹರಣೆಗಳಷ್ಟೇ. ಇಂಥಹ ಅನೇಕಾನೇಕ ಹಾಡುಗಳು ನನ್ನಲೂ ಮನೆಮಾಡಿವೆ. ಇನ್ನು ಅವರ ವ್ಯಕ್ತಿತ್ವದ ಬಗ್ಗೆ ಹೇಳಹೊರಟರೆ, ಲೇಖನ ಹೋಗಿ ಕಥೆಯಾಗುವ ಸಾಧ್ಯತೆಯಿರುವುದರಿಂದ, ಕೆಲವು ಮಾತುಗಳಲ್ಲಿ ಹೇಳುತ್ತೇನೆ…

ನಾನವರನ್ನು ನೋಡಿದ ಮೊದಲ ದಿನದಿಂದ ಇಂದಿನವರೆಗೂ, ಅನೇಕ ಸಾರಿ ಗಮನಿಸಿದ್ದೇನೆ. ಅವರು ಛಲವಾದಿ, ಕೆಲವೊಮ್ಮೆ ಹಠವಾದಿ, ಸೀದಾ ಮಾತನಾಡುವ ನಿಷ್ಠುರವಾದಿ. ಸಹನಾಮಯಿ, ಸ್ನೇಹಿ, ಅತೀ ಉತ್ಸಾಹಿ, ಕೆಲವೊಮ್ಮೆ ಕಲಹಿ ಹೀಗೇ… ಅವರದು ಬಹುವಿಧ ವ್ಯಕ್ತಿತ್ವ. ಇನ್ನು ಅವರ ಬಹುಮುಖ ಪ್ರತಿಭೆಯತ್ತ ನೊಡಿದರೆ, ಒಳ್ಳೇ ವಾಗ್ಮಿ, ಜ್ಞಾನಿ, ಸ್ವಾಭಿಮಾನಿ, ದೇಸಿ ವಿಜ್ಞಾನಿ, ಸೂಕ್ಷ್ಮ ಗ್ರಹಿ ಹೀಗೇ ಮುಂದುವರೆಯುತ್ತಾ ಹೋಗುತ್ತದೆ. ಇಷ್ಟೆಲ್ಲಾ ಯೋಗ್ಯತೆಯಿರುವ ಹಂಸಲೇಖಾರವರನ್ನು ಚಿತ್ರರಂಗ ಉಪಯೋಗಿಸಿಕೊಂಡಿದ್ದು ಕೇವಲ ಸೀಮಿತ ಕೆಲಸಕ್ಕಾಗಿ ಮಾತ್ರ. ಹಾಗೊಂದುವೇಳೆ, ಅವರ ಸಕಲ ಪ್ರತಿಭಾ ಪ್ರದರ್ಶನಕ್ಕೆ ಅಲ್ಲಿ ಪ್ರೋತ್ಸಾಹವಾಗಲೀ, ಅವಕಾಶವಾಗಲಿ ಇದ್ದಿದ್ದರೆ, ಮೇಲೆ ಪಟ್ಟಿ ಮಾಡಿದ ಅವರ ಎಲ್ಲಾ ಮುಖಗಳನ್ನು ನೋಡಿ ಆನಂದಿಸಬಹುದಾದ ಸುವರ್ಣಾವಕಾಶ ಕನ್ನಡಿಗರಿಗಿರುತ್ತಿತ್ತು. ಆದರೂ ಅವರು ತಮ್ಮ ಚಿತ್ರ ಜೀವನದ ಏರುಪೇರುಗಳಿಂದಾಗಿ ಎಂದೂ ಧೃತಿಗೆಟ್ಟವರೂ ಅಲ್ಲ ಅಥವಾ ನಿರುತ್ಸಾಹಿಯಾದವರೂ ಅಲ್ಲ ಮತ್ತು ಅವಕಾಶಗಳಿಗಾಗಿ ಎಂದೂ ಕೈಚಾಚಿದವರೂ ಅಲ್ಲ. ಅವಕಾಶಗಳನ್ನು ತಾವೇ ಸೃಷ್ಟಿಸಿಕೊಂಡು ಅವಕಾಶವಾದಿಗಳಿಗೆಲ್ಲಾ ಉತ್ತರ ನೀಡಿದವರು. ದುಡಿದದ್ದನ್ನೆಲ್ಲಾ ಸಾರ್ಥಕ ಪಡಿಸಿಕೊಂಡವರು. ಬಂದದ್ದನ್ನೆಲ್ಲಾ ಕೂಡಿಟ್ಟುಕೊಂಡು, ಬರಬೇಕಾದುದ್ದನ್ನೆಲ್ಲಾ ಬಾಚಿಟ್ಟುಕೊಂಡು, ನನಗೆ, ನನ್ನ ಮಕ್ಕಳಿಗೆ, ನನ್ನ ಮೊಮ್ಮಕ್ಕಳಿಗೆ …. ಎಂದು ಕೊನೆಯಿಲ್ಲದಾಸೆಗಳಿಂದ ಲೂಟಿ ಮಾಡುವ ಜನರಿಗೆಲ್ಲಾ, “ನಿಮ್ಮಲ್ಲಿರುವಷ್ಟರಲ್ಲೇ ಪರರಿಗೇನೆಲ್ಲಾ ಮಾಡುವವಕಾಶವಿದೆ” ಎಂಬುದನ್ನು ಅಕ್ಷರಶಃ ತೋರಿಸಿಕೊಟ್ಟವರು.

ಬನ್ನಿ ಒಮ್ಮೆ ಅವರ “ದೇಸಿ ವಿದ್ಯಾ ಸಂಸ್ಥೆ”ಯ ಕಡೆ ನೋಡ ಬನ್ನಿ. ಅವರ ಮೂವತ್ತು ವರ್ಷಗಳ ನಾಟಕ, ಸಿನಿಮಾ, ಸಂಗೀತ, ಸಾಹಿತ್ಯ ಜೀವನದಲ್ಲಿ ಕಲಿತದ್ದನ್ನೆಲ್ಲಾ ಹೇಗೆ ಪುಕ್ಕಟೆಯಾಗಿ ಬಡಮಕ್ಕಳಿಗೆ ಧಾರೆ ಎರೆಯುತ್ತಿದ್ದಾರೆಂಬುದನ್ನು ಕಣ್ಣಾರೆ ಕಾಣ ಬನ್ನಿ. ಆ ಮೂಲಕ ನಿರ್ಲಕ್ಷ್ಯಕ್ಕೊಳಗಾದ ದೀನರ, ದಲಿತರ, ಬುಡಕಟ್ಟಿನ, ಹಳ್ಳಿಯ ಮಕ್ಕಳನ್ನು ಎಳೆತಂದು, ಪ್ರೋತ್ಸಾಹದ ನೆರವಿಲ್ಲದೆ ಬಡವಾದ ಪ್ರತಿಭೆಗಳನ್ನೆಲ್ಲಾ ಕರೆತಂದು, ಅವರ ಕಣ್ಮುಂದಿರುವ ಬೆಳಕಿನ ಅರಿವಾಗುವಂತೆ ಅಕ್ಷರ, ಸಂಗೀತಾ, ನಾಟಕ, ನೃತ್ಯ, ಜನಪದ ಹೀಗೆ ಹಲವಾರು ದೇಸಿ ಕಲೆಗಳನ್ನೊಳಗೊಂಡ ದೊಡ್ಡ ಪದವಿಯನ್ನು ಪಡೆಯುವ ಅವಕಾಶವನ್ನು ಹೇಗೆ ಸೃಷ್ಟಿಸಿದ್ದಾರೆಂದು ತಿಳಿಯ ಬನ್ನಿ. ಆಗ ಬಹುಶ: ಅರ್ಥವಾದೀತು ಈ ಮಹಾಶಯನ ಮನಸ್ಸಿನಲ್ಲೇನಿದೆ ಎಂದು.

ಬಣ್ಣ ಬಣ್ಣದ ಸಿನಿಮಾ ಲೋಕದಲ್ಲಿ ತಮ್ಮತನವನ್ನು ಉಳಿಸಿಕೊಳ್ಳಲಾಗದೇ, ಕಳೆದು ಹೋದವರು ಬೇಕಾದಷ್ಟು ಜನರಿದ್ದಾರೆ. ಝಗಮಗಿಸುವ ಚಿತ್ರಲೋಕಕ್ಕೆ “ಎಂಟ್ರಿ” ಕೊಟ್ಟ ಯಾರೂ ಅದಕ್ಕೆ ಸಂಪೂರ್ಣ ವಿರುದ್ಧವೆನ್ನಬಹುದಾದ, ಬಣ್ಣಗಳಿಲ್ಲದ, ಉಣ್ಣಲೂ ಇರದ, ಸಿನಿಮಾದಂತೆ ಕಣ್ಣು ಕೋರೈಸಲಾಗದ, ಮಣ್ಣು ವಾಸನೆಯಿಂದ ಕೂಡಿದ, ಹಳ್ಳಿ ಕಲೆಗಳಲ್ಲಿ ಆಸಕ್ತಿ ಹೊಂದಿರುವುದಿಲ್ಲ. ಹಾಗೇ ನೋಡಿದರೆ, ಹಂಸಲೇಖಾ ಅವರು ಅಯ್ದುಕೊಳ್ಳಬಹುದಾದ ಹಾದಿಗಳು ಬೇಕಾದಷ್ಟಿದ್ದವು. ಆದರೆ, ಅವರು ಹೋದದ್ದು, ನಾಶವಾಗಿ ಹೋಗುತ್ತಿರುವ ದೇಸಿ ಕಲೆಗಳನ್ನು ಕೂಡಿ ಹಾಕಿ, ಸೊರಗಿ ಹೋಗುತ್ತಿರುವ ದೇಸಿ ಕಲಾ ಪ್ರಭೆಗಳನ್ನೆಲ್ಲಾ ಕಲೆ ಹಾಕಿ, ಕಾಯಕಲ್ಪ ನೀಡಬೇಕೆಂದು ತಮ್ಮ ಕೊನೆಯುಸಿರಿರುವವರೆಗೂ ಹೋರಾಡಿ, ಜಾನಪದ ಲೋಕವನ್ನೇ ಸೃಷ್ಟಿಸಿದ ಹೆಚ್.ಎಲ್. ನಾಗೇಗೌಡರು ಮಾಡಿದ ಸಂಗ್ರಹಣೆಯನ್ನು ಸಂವಹನ ಮಾಡಿ ತೋರಿಸಬೇನ್ನುವ ಬೇರಿನಾಳಕ್ಕೆ. ಅಲ್ಲಿ ತಳದಲ್ಲಿ ಕೂತು, ಆಸರೆಯ ಕೈ ಒಂದಕ್ಕಾಗಿ ಆಸೆಗಣ್ಣುಗಳಿಂದ ಆಕಾಶ ನೋಡುತ್ತಾ ಕೊಳೆತುಹೋಗುತ್ತಿದ್ದ ದೇಸಿ ಕಲಾ ಕುಸುಮಗಳ ಆರ್ತನಾದ ಕೇಳುವುದಕ್ಕೆ. ಅಲ್ಲಿಂದೆಳೆತಂದು, ಅವರ ಮೈ ತೊಳೆದು, ಮಡಿ ಕೊಟ್ಟು, ತುತ್ತಿಟ್ಟು, ನೆಲೆಕೊಟ್ಟು, “ಬೇರುಗಳು ನೀವು, ಚಿಗುರಿನಿಂದೇಕೆ ನಲುಗಿ ಹೋಗುವಿರಿ” ಎಂಬ ಒತ್ತಾಸೆಯಿಟ್ಟು ಕೈಲಾದಷ್ಟು ಜನಗಳ ಕೈ ಹಿಡಿಯುವ ಕಾಯಕಕ್ಕೆ.

ಇಂಥಹ ಸಾರ್ಥಕ ಬದುಕಿನ ಸಾಕ್ಷಾತ್ಕಾರಕ್ಕಾಗಿ ಹಗಲಿರುಳೆನ್ನೆದೆ, ಅವರಿವರೆನ್ನದೆ ಏಕಾಂಗಿಯಾಗಿ ಹೋರಾಡುತ್ತಿರುವ ಹಂಸಲೇಖಾರ ಕೈಗೆ ಕೈ ಜೋಡಿಸುವ ಮಸಸ್ಸಿದ್ದರೆ, “ಹಂಸಲೇಖಾ ದೇಸಿ ವಿದ್ಯಾ ಸಂಸ್ಥೆ” ನಿಮ್ಮನ್ನು ಸ್ವಾಗತಿಸುತ್ತದೆ. ನೆರವಿನಾಸರೆಯನ್ನು ನೀಡುವ ಉದಾರತೆಯಿದ್ದರೆ, ನಿಮಗೆ ವಂದಿಸುತ್ತದೆ.

“ನಿಮ್ಮ ನೆರವು, ದೇಸಿ ಮಕ್ಕಳುಳಿವು”

೦೫-೦೨-೨೦೧೦

You may also like...

Leave a Reply