ರಂಗರಾಯರೇ, ಅಗಣಿತ ರಾಗಮಣಿಗಳ ನಡುವೆ ನಿಮ್ಮನೇ ಮೆಚ್ಚಿದೆ ನಾನು


ಎಂ.ರಂಗರಾವ್ ಎಂದೊಡನೆ ತಕ್ಷಣ ನೆನಪಿಗೆ ಬರುವುದೇನೆಂದರೆ ಕನ್ನಡದ ಸುಶ್ರಾವ್ಯ ಚಲನ ಚಿತ್ರಗೀತೆಗಳ ಬಹು ದೊಡ್ಡ ಪಟ್ಟಿ. ಆಕಾಶವಾಣಿಯ “ಕೇಳುಗರ ಮೆಚ್ಚಿನ ಚಿತ್ರಗೀತೆ” ಕಾರ್ಯಕ್ರಮಗಳಲ್ಲಿ, ಕನ್ನಡದ ಯಾವ ಸಂಗೀತ ನಿರ್ದೇಶಕರ ಅತೀ ಹೆಚ್ಚು ಹಾಡುಗಳು ಇದುವರೆಗೂ ಪ್ರಸಾರವಾಗಿವೆ ಎಂದು ಪಟ್ಟಿ ಮಾಡಿದರೆ, ಬಹುಶಃ ಜಿ.ಕೆ.ವೆಂಕಟೇಶ್ ನಂತರ ಅವರ ಹತ್ತಿರತ್ತಿರ ನಿಲ್ಲಬಲ್ಲ ಮತ್ತೊಬ್ಬ “ಸಂಗೀತ ಕಲಾನಿಧಿ” ಶ್ರೀ ಎಂ.ರಂಗರಾವ್ ಅವರೊಬ್ಬರೇ. ವಿಜಯ ಭಾಸ್ಕರ್, ಟಿ.ಜಿ.ಲಿಂಗಪ್ಪ, ರಾಜನ್-ನಾಗೇಂದ್ರರಂಥಹ ದೈತ್ಯ ಸಂಗೀತ ಸಾರ್ವಭೌಮರ ನಡುವೆ ಇದ್ದೂ, ತಮ್ಮ ಪ್ರತಿಭಾ ಸಾಮರ್ಥ್ಯದಿಂದಲೇ ತಮ್ಮ ಸ್ಥಾನವನ್ನು “ಎಡಕಲ್ಲು ಗುಡ್ಡದ ಮೇಲೆ” ಇರಿಸಿ, ಅದನ್ನು ಅಷ್ಟೇ ಅಚ್ಚುಕಟ್ಟಾಗಿ ಕಾಯ್ದುಕೊಂಡವರು ರಂಗರಾಯರು. ಮೈ ನವಿರೇಳಿಸುವಂಥಹ ಹಾಡುಗಳನ್ನು ಕೊಟ್ಟು ಕನ್ನಡ ಚಿತ್ರಲೋಕದಲ್ಲಿ “ಹೊಸ ಬೆಳಕು” ಮೂಡಿಸಿ “ಅರುಣ ರಾಗ” ಹಾಡಿದವರು. ಎಂದೆಂದಿಗೂ ಮರೆಯಲಾಗದಂಥಹ ಸಂಗೀತದ ಸುಧೆಯನ್ನು ಕನ್ನಡಿಗರಿಗೆ ಉಣಬಡಿಸಿದವರು. ಅವರ ಒಂದೊಂದು ಹಾಡುಗಳನ್ನೂ ಇಲ್ಲಿ ಪಟ್ಟಿಮಾಡಿದರೆ, “ಹೌದಾ! ಇದು ರಂಗರಾವ್ ಅವ್ರ ಟ್ಯೂನಾ?” ಅಂತಾ ಅಚ್ಚರಿ ಪಡದೇ ಇರಲಾರಿರಿ. ನಮಗೆ ತಿಳಿಯದೇ ಅವರ ಹಾಡುಗಳು “ಒಲವಿನಾ ಬಣ್ಣ”ದ ಓಕುಳಿಯಾಗಿ “ಹೃದಯದಲ್ಲಿ ಝೇಂಕಾರ” ಮಾಡುತ್ತಿರುತ್ತವೆ. ಕೆಲವು ಇವೇನು “ಪ್ರೇಮದಾ ಕಾದಂಬರಿ” ಗಳೋ ಅನ್ನಿಸಿದರೆ, ಮತ್ತೆ ಕೆಲವು ಹಾಡುಗಳು “ಹೃದಯ ಪಲ್ಲವಿ”ಗಳಾಗಿ ಹೊರಹೊಮ್ಮುತ್ತಿರುತ್ತವೆ. ಎಷ್ಟೋ ಹಾಡುಗಳು, ಎಷ್ಟೋ ಜನರಿಗೆ “ಇವು ರಂಗರಾವ್ ಸಂಗೀತದಿಂದ ಮೂಡಿಬಂದವೆಂದು” ಗೊತ್ತೇ ಇರುವುದಿಲ್ಲ. “ಇದೇ ರಾಗದಲ್ಲಿ, ಇದೇ ತಾಳದಲ್ಲಿ” ಹಾಡು ಹೀಗೇ ಇರಬೇಕು ಎಂದರೆ, ಹಾಗೇ ಹಾಡು ಮಾಡಬಲ್ಲದರಾಗಿದ್ದರು ರಂಗರಾವ್ ಅವರು. ಅಂಥಹ ಸುಪ್ರಸಿದ್ಧ ಹಾಡುಗಳನ್ನು “ಕನ್ನಡ ನಾಡಿನ ರಸಿಕರ ಮನ”ದಲ್ಲಿ ಶಾಶ್ವತವಾಗಿ ಇರಿಸಿಹೋದ ರಂಗರಾವ್ ಅವರ ಹೆಸರು ಬಹುತೇಕ ಕನ್ನಡಿಗರಿಗೆ ತಿಳಿದೇ ಇಲ್ಲ ಅಥವಾ ನೆನಪಿನಲ್ಲಿಲ್ಲ ಎಂದು ಕೇಳಿದರೆ, ಅವರ ಹಾಡುಗಳನ್ನು ಆಸ್ವಾದಿಸಿ ಆನಂದಿಸುವ ನನ್ನಂಥಹ ಅಭಿಮಾನಿಗಳ “ಹೂವಂಥ ಹೃದಯವನು” ಹಿಂಡಿದಂತಾಗಿ, ಮನಸ್ಸಿಗೆ ಅತೀವ ನೋವಾಗುತ್ತದೆ. ಸಂಗೀತದ ಗಂಧ-ಗಾಳಿ ಏನೆಂದೂ ತಿಳಿಯದ ಎಷ್ಟೊಂದು ಸಂಗೀತ ನಿರ್ದೇಶಕರು ನಮ್ಮಲ್ಲಿದ್ದಾರೆ ಎಂದು ನಾನಿಲ್ಲಿ ಪಟ್ಟಿಮಾಡುವುದಿಲ್ಲ ಆದರೆ, ಅವರು ಸುದ್ದಿ (ಸದ್ದು) ಮಾಡುವುದನ್ನು ನೋಡಿದಾಗ ಮಾತ್ರ ಎಂಥವರಿಗೂ ಕೋಪಾವೇಶ ಬರುತ್ತದೆ. ನಮ್ಮ ಜನಗಳೂ ಇಂಥಹ ಮಹಾಶಯರನ್ನು ಮೆಚ್ಚಿಕೊಳ್ಳುತ್ತಿರುವುದೊಂದು ಸಾಂಸ್ಕೃತಿಕ ದುರಂತಕ್ಕೆ ಸಾಕ್ಷಿ. ಇಂಥಹ ಪ್ರತಿಭಾ ಶೂನ್ಯ, ಅಜ್ಞಾನಿ ಜನಗಳ ನಡುವೆ ಕೇಳಿದ ಮಾತ್ರದಲ್ಲೇ “ಕಲ್ಲೂ ವೀಣೆ ನುಡಿಸು”ವಂಥಹ ರಾಗಗಳನ್ನು ನೀಡಿದ ಎಂ.ರಂಗರಾವ್‍ರಂಥ ಪ್ರತಿಭೆಗಳ ಹೆಸರು ಎಲ್ಲಿ ಅಳಿಸಿಹೋಗುವುದೋ ಎಂಬ ಭೀತಿ ಕಾಡುತ್ತದೆ. ನಮ್ಮ ಅತೀ ನಾಗರೀಕತೆಯಿಂದಾಗುತ್ತಿರುವ ಅನಾಹುತಗಳನ್ನು ನೆನಪಿಸಿಕೊಂಡಾಗ ಕಾಲಾಧಿಕಾಲದಿಂದ ಕಾಪಾಡಿಕೊಂಡು ಬಂದ ಶ್ರೀಮಂತ ಸಂಸ್ಕೃತಿಗಳೆಲ್ಲಿ ಮಾಯವಾಗಿಹೋಗುತ್ತವೋ ಎನ್ನುವ ಭಯ “ಹಗಲು ರಾತ್ರಿ” ಆವರಿಸಿಕೊಳ್ಳುತ್ತದೆ. ನಾವು ನಮ್ಮತನವನ್ನೂ, ನಮ್ಮ ಜನವನ್ನೂ, ನಮ್ಮದೆಲ್ಲವನ್ನೂ ಹರಾಜಿಗಿಟ್ಟು, ಮೋಜಿನ ಜೀವನದತ್ತ ಮುಖಮಾಡಿಕೊಂಡು, ಮೌಲ್ಯದ ಅರಿವಿಲ್ಲದೆ, ಒಳ್ಳೆಯದನ್ನು ಒಳ್ಳೆಯದೆನ್ನುವ ದೈರ್ಯವಿಲ್ಲದೆ, ಕೆಟ್ಟದ್ದನ್ನು ಕೆಟ್ಟದ್ದೆನ್ನುವ ಶಕ್ತಿಯಿಲ್ಲದೆ, ನಿರ್ವೀರ್ಯರಾಗಿ ಬದುಕು ನಡೆಸಿಕೊಂಡು ಹೋಗಲು ಮುಂದಾಗಿರುವುದನ್ನು ಗಮನಿಸಿದರೆ, ಮುಂದೆ ಏನೇನನಾಹುತಗಳಾಗಿಹೋಗುವುವೋ ಎಂದು ಗಾಬರಿಯಾಗುತ್ತದೆ. ಈ ಜನಗಳು “ಮಾನವರಾಗುವರೋ ಇಲ್ಲ ದಾನವರಾಗುವರೋ” ಎಂದು ದಿಗಿಲಾಗುತ್ತದೆ…..

M Rangarao, Music Director

ಓಹ್! ಹೀಗೆ ಇದರ ಬಗ್ಗೆ ಮುಂದುವರೆಸಿ ಮಾತನಾಡ ಹೊರಟರೆ ಇದೇ ಒಂದು ದೊಡ್ದ ವಿಷಯವಾಗುವ ಸಂಭವವಿರುವುದರಿಂದ, ಸದ್ಯಕ್ಕೆ ನಮ್ಮ ಮುಖ್ಯ ವಿಷಯವನ್ನು ದಿಕ್ಕು ತಪ್ಪಿಸದೆ, ರಂಗರಾಯರ ಬಗ್ಗೆ “ಮುತ್ತಿನಂಥ ಮಾತೊಂದು” ಹೇಳಿ ಮುಂದಿನ ಲೇಖನದಲ್ಲಿ ಅದನೆಲ್ಲಾ ಚರ್ಚಿಸೋಣ.

“ಬಾಳೊಂದು ಭಾವಗೀತೆ” ನಿಜ. ಆದರೆ ಇಲ್ಲಿ ನಾವೆಂದೂ “ನಗಬೇಕು, ನಗಿಸಬೇಕು” ಏಕೆಂದರೆ “ನಕ್ಕರೆ ಅದೇ ಸ್ವರ್ಗ” ಅಲ್ಲವೇ? ಹೌದು! ನಿಜ ಯಾವಾಗಲೂ “ನಗುವುದೇ ಸ್ವರ್ಗ, ಅಳುವುದೇ ನರಕ” ಎಂದು ನಮಗೆಲ್ಲಾ ಹೇಳಿದ ರಂಗರಾಯರು “ಕೆಂಪು ಗುಲಾಬಿಯ ಚೆಂದುಟಿ ಚೆಲುವಿನಂತೆ” ಸದಾ ನಗುನಗುತ್ತಾ, ಕನ್ನಡದ್ದೂ, ನನ್ನದೂ “ಜನ್ಮ ಜನ್ಮದಾ ಅನುಬಂಧ” ನನಗೆ ಕನ್ನಡದ “ಮನೆಯೇ ಮಂತ್ರಾಲಯ” ಎಂದು ಹೋದಕಡೆಯೆಲ್ಲಾ ಹೇಳಿಕೊಳ್ಳುತ್ತಾ, ಜೊತೆ ಜೊತೆಗೆ “ಅ ಆ ಇ ಈ ಕನ್ನಡದ ಅಕ್ಷರಮಾಲೆ” ಯನ್ನು ಕಲಿತುಕೊಳ್ಳುತ್ತಾ, ನೆರೆ ಆಂಧ್ರದಿಂದ ಬಂದಿದ್ದರೂ “ಈ ದೇಶ ಚೆನ್ನ, ಈ ಮಣ್ಣು ಚಿನ್ನ” ಇಲ್ಲಿರೋದೇ ನನ್ನ ಪುಣ್ಯ ಎಂದು ಕರುನಾಡ ಕಂದನಾಗಿ ಕೊನೆಗೆ, ಕನ್ನಡ ಸಿನಿಮಾ ಸಂಗೀತಲೋಕದ ದಿಗ್ಗಜರಾಗಿಹೋದ ಅಪ್ರತಿಮ ಸಂಗೀತ ಸಾಮ್ರಾಟ ಎಸ್.ಪಿ. ಬಾಲಸುಬ್ರಮಣ್ಯಂ ರಂಥಹ ಗಾಯಕನನ್ನು ಕನ್ನಡಕ್ಕೆ ಪರಿಚಯಿಸಿದವರು. ತಮ್ಮ ಸಂಗೀತದ ಶಕ್ತಿಮಾತ್ರದಿಂದಲೇ ಕನ್ನಡಿಗರೆದೆ “ಮಾನಸವೀಣೆ” ಯನ್ನು ಮೀಟಿದವರು. ಒಳ್ಳೇ ಸಂಗೀತ ಹಾಗೂ ಸ್ವರ ಜ್ಞಾನವಿದ್ದ ಅಣ್ಣಾವ್ರೂ ಕೂಡ “ನಾನೇ ರಾಜಕುಮಾರ, ಕನ್ನಡನಾಡಿನ ಹೆಮ್ಮೆಯ ಕುವರ” ಎಂದು ರಂಗರಾಯರ ಸಂಗೀತವನ್ನು ಅತಿಯಾಗಿ ಮೆಚ್ಚಿಕೊಂಡಿದ್ದರು. ಅವರಿಗೆ ರಾಷ್ಟ್ರಪ್ರಶಸ್ತಿ ತಂದುಕೊಟ್ಟ “ನಾದಮಯ” ಹಾಡು ಕೂಡ “ರಂಗರಾಯರು ಹಿಂದೇ ಯಾವುದೋ ಸಿನಿಮಾಗಾಗಿ ಹಾಕಿದ್ದ ರಾಗವೇ” ಎನ್ನುವ ಸುದ್ದಿಯೂ ಆ ಸಮಯದಲ್ಲಿ ಹರಡಿಹೋಗಿತ್ತು. ಆದರೆ, ಆಗ ರಂಗರಾಯರು ಬದುಕಿರಲಿಲ್ಲವಾದ್ದರಿಂದ ಬಹುಶಃ ಅದೊಂದು ಅನುಮಾನವಾಗೇ ಉಳಿದುಕೊಳ್ಳಬೇಕಾಯಿತು. ಅದೇನಾದರೂ ಇರಲಿ ಆದರೆ, ರಂಗರಾಯರು ಮಾತ್ರ ರಾಜ್ ಚಿತ್ರಗಳಲ್ಲಿ ಸ್ವರ ಸಂಯೋಜಿಸಿ ಹೊರತೆಗೆದ ಹಾಡುಗಳು ಮಾತ್ರ ಒಂದೊಂದೂ “ಅಪರಂಜಿ”. “ಓ! ಪ್ರಿಯತಮೆ”ಯೇ ನೀನು ಅಲ್ಲಿ ಒಂದು “ಕೋಗಿಲೆ ಹಾಡಿದೆ ಕೇಳಿದೆಯಾ” ಎಂದು ಕೇಳಿಕೊಂಡು “ಸದಾ ಕಣ್ಣಲಿ” ಮೋಡಿ ಮಾಡುತ್ತಾ “ಚೆಲುವೆಯೇ ನಿನ್ನ ನೋಡಲು” ನಾನು ಬಂದಿದ್ದೇನೆ, ಆದರೆ, ನೀನು ಎಲ್ಲಿರುವೆ? “ಗಿಣಿಯೇ, ನನ್ನ ಅರಗಿಣಿಯೇ?” ನೀನು “ಆಗಸದಿಂದ ಮರೆಯಾಗಿ ಹೋಗದೆ ನಿಲ್ಲು” ನನ್ನೆದುರು ಬಾ, ನಾನೆಂದೂ ನಿನ್ನನ್ನು ಕೈ ಬಿಡಲಾರೆ. ನನ್ನನ್ನು ನಂಬು ನಾನು ನಿಜವಾಗಿಯೂ “ನಿನ್ನಂಥ ಚೆಲುವೆಯಾ, ಇನ್ನೆಲ್ಲೂ ಕಾಣೆನು ರಾಜಕುಮಾರಿ”.

ಏನು? “ಹೇಳುವುದು ಒಂದು, ಮಾಡುವುದು ಇನ್ನೊಂದು” ಅಂದೆಯಾ? ಓಹ್! ಇಲ್ಲ ಚೆಲುವೆ ಅಂದು ನಾನು “ಹೂವಿಂದ ಬರೆವ ಕಥೆಯಾ, ಮುಳ್ಳಿಂದ ಬರೆದೆ” ನನ್ನನ್ನು ಕ್ಷಮಿಸು. ನಿನಗೆ ನೋವಾಗಿದೆ ನಿಜ ಆದರೆ, “ಕಣ್ಣೀರ ಧಾರೆ ಇದೇಕೆ?” “ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕಥೆಯಾ ಹೇಳಿವೆ”ಯಲ್ಲಾ. ನಿನಗೆ ತಿಳಿಯದೇ ನಾವೆಲ್ಲಾ “ಸಮಯದ ಗೊಂಬೆ”ಗಳು ಅಂತಾ. ಆ ಸೂತ್ರಧಾರನಾಡಿಸಿದಂತೆ ಕೆಲವೊಮ್ಮೆ ನಾವೆಲ್ಲಾ ಪಾತ್ರಗಳನ್ನು ಮಾಡಬೇಕಾಗುತ್ತದೆ. ಹಳೆಯದನ್ನೆಲ್ಲಾ ಮರೆಯೋಣ, ಜೊತೆಯಾಗಿ “ಬಾಳೇ ಪ್ರೇಮಗೀತೆ” ಎಂದು ಹಾಡೋಣ. ಇನ್ನು ಮುಂದೆ ನನ್ನ ಕಂಡಾಗಲೆಲ್ಲಾ ನೀನು “ಸಂಕೋಚವ ಬಿಡು ಗೆಳತಿಯೇ, ಹೇಳು ನಿನ್ನಾಸೆಗಳೆಲ್ಲವನೂ” ನಾನು ಖಂಡಿತಾ ಪೂರೈಸುತ್ತೇನೆ. ನೋಡು “ಶ್ರಾವಣ ಮಾಸ ಬಂದಾಗ” “ವಿರಹ ಗೀತೆ ಇನ್ನಿಲ್ಲ” ಬರೀ “ಪ್ರಣಯ ಗೀತೆ ಬಾಳೆಲ್ಲ”… ಹುಂ! ನಾನು ಇಷ್ಟೆಲ್ಲಾ ಮಾತನಾಡುತ್ತಿದ್ದರೂ ನೀನು “ಅಲ್ಲಿ ಇಲ್ಲಿ ನೋಡುವೆ ಏಕೆ” “ಬಾ ಭಯವನು ಬಿಡು” “ಬೇರೆ ಏನೂ ಬೇಡ ಎಂದಿಗೂ, ನೀನು ನನ್ನವಳಾಗು, ಬೇರೇನನೂ ನಾ ಬೇಡೆನು ಚಿನ್ನಾ ನಾ ಬೇಡೆನು” …. ಹೀಗೆ ಅಣ್ಣಾವ್ರಾ ಎಲ್ಲಾ ಪಾತ್ರಗಳ, ಸನ್ನಿವೇಶಗಳ ಹಾಡುಗಳನ್ನು ಅಚ್ಚುಕಟ್ಟಾಗಿ ಅಳವಡಿಸಿ, ಹಾಡು ಸಿನಿಮಾಗಳಲ್ಲೂ ಅರ್ಥಪೂರ್ಣ ಎನ್ನುವುದನ್ನು ಅಕ್ಷರಶಃ ಮಾಡಿ ತೋರಿಸಿದವರು ರಂಗರಾಯರು.

ಇಂಥಹ ರಂಗರಾಯರ ಹಾಡಿನ ಮೋಡಿಗೆ ಮಾರುಹೋದವರಲ್ಲಿ ಪುಟ್ಟಣ್ಣನವರೂ ಹೊರತಾಗಿಲ್ಲವೆಂದರೆ ಅಚ್ಚರಿಯಾಗುತ್ತದೆ. ಏಕೆಂದರೆ, ನಾವು ಪುಟ್ಟಣ್ಣನವರ ಚಿತ್ರಗಳಲ್ಲಿ ಕಾಣುವ ಏಕೈಕ ಸಂಗೀತ ನಿರ್ದೇಶಕರೆಂದರೆ ಅದು, ವಿಜಯ ಭಾಸ್ಕರ್ ಮಾತ್ರ. ಆರ್. ರತ್ನ (ಕಪ್ಪು-ಬಿಳುಪು) ಹಾಗೂ ಉಪೇಂದ್ರ ಕುಮಾರ್ (ಧರ್ಮಸೆರೆ) ತಲಾ ಒಂದೊಂದು ಸಿನಿಮಾಗೆ ಸಂಗೀತ ನೀಡಿದ್ದು ಬಿಟ್ಟರೆ, ಬೇರೆ ಯಾರೂ ಪುಟ್ಟಣ್ಣನವರ ಜೊತೆ ಕೆಲಸ ಮಾಡಿಲ್ಲ ಆದರೆ, ರಂಗರಾವ್‍ರನ್ನು ಹೊರತು ಪಡಿಸಿ. “ಎಡಕಲ್ಲು ಗುಡ್ಡದ ಮೇಲೆ”, “ಸಾಕ್ಷತ್ಕಾರ”, ಚಿತ್ರದ ಹಾಡುಗಳು “ಗೆಜ್ಜೆಪೂಜೆ”, “ನಾಗರಹಾವು” ಹಾಡುಗಳಿಗೆ ಸರಿ ಸಮಾನವಾಗಿವೆ. ಕನ್ನಡದ “ಕರುಳಿನ ಕರೆ” ಕೇಳಿ ಮಾರುಹೋದ ಪುಟ್ಟಣ್ಣನವರು, ಅದೇ ರಂಗರಾವ್ ಅವರಿಂದ “ರಂಗನಾಯಕಿ” ಸೃಷ್ಟಿಸಿದರು. “ಒಲವೇ ಜೀವನ ಸಾಕ್ಷತ್ಕಾರ”, “ವಿರಹ ನೂರು ನೂರು ತರಹ”, “ಮಂದಾರ ಪುಷ್ಪವೂ ನೀನು”, “ಫಲಿಸಿತು ಒಲವಿನ ಪೂಜಾಫಲ” ಮುಂತಾದ ಮಾಧುರ್ಯ ತುಂಬಿದ ಹಾಡುಗಳನ್ನು ನಂತರದ ದಿನಗಳಲ್ಲಿ ನಮಗಾಗಿ ಕೊಟ್ಟರು.

ಇವಷ್ಟೂ ದಿಗ್ಗಜರ ಕತೆಯಾದರೆ, ಇನ್ನು ಉಳಿದ ಅವರ ಅಮೂಲ್ಯ ಹಾಡುಗಳು ಒಂದೇ, ಎರಡೇ. “ನಮ್ಮೀ ಬಾಳೇ ರಸಮಯ ಕಾವ್ಯ, ಪುಟ ಪುಟವೂ ನವ್ಯ”, “ಮೋಹನ ಮುರಳಿಯ ನಾದಲೀಲೆಗೆ”, “ಏಕೋ ಏನೋ ಈ ನನ್ನ ಮನವು”, “ನೀನಿರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ”, “ನೀ ಹೀಂಗೇ ನೋಡಬ್ಯಾಡ ನನ್ನ” “ನಡೆದಾಡೋ ಕಾಮನ ಬಿಲ್ಲೇ”, “ಬೆಳ್ಳಿ ಮೂಡಿತು, ಕೋಳಿ ಕೂಗಿತು”, “ಅರಳಿದೆ, ಅರಳಿದೆ”, “ಕಣ್ಣಂಚ ಮಿಂಚಲ್ಲಿ ಮಾತಾಡಿದೆ”, “ಹೂವು ಚೆಲುವೆಲ್ಲಾ ನಂದೆಂದಿತು”, “ಬಾನಿಗೆ ನೀಲಿಯಾ, ಮೋಡಕೆ ಬೆಳ್ಳಿಯ ಬಣ್ಣವ ತಂದವನು”, “ಒಲವಿನ ಉಡುಗೊರೆ ಕೊಡಲೇನು”, “ವಾರ ಬಂತಮ್ಮ, ಗುರುವಾರ ಬಂತಮ್ಮ”, “ಹೊಸಬಾಳು ಸೊಗಸೆಂದು ಕೊಂಡೆ”, “ನೀ ನುಡಿದರೆ ರಾಗ, ನೀ ನಡೆದರೆ ತಾಳ”, “ನಿನ್ನಂಥ ಮುದ್ದಾದ ಹೆಣ್ಣನ್ನು ಕಂಡಿಲ್ಲ”, “ನಾನೊಂದು ತೀರ, ನೀನೊಂದು ತೀರ”, “ಈ ಬಂಧನಾ ಜನುಮ ಜನುಮದಾ ಅನುಬಂಧನ”, “ಆಕಾಶದಲ್ಲಿ ಬಾನಾಡಿಯಾಗಿ”, “ಬೀಸೋ ಗಾಳಿಯಲಿ ಅಲೆವಾ ನೀರಾಲೆ”, “ಧನಲಕ್ಷ್ಮಿ ದಯೆತೋರು ಬಾಮ್ಮ”, “ಕನಸಿದೋ, ನನಸಿದೋ”, “ಕಣ್ಣಂಚಲಿ, ತುಟಿ ಮಿಂಚಲಿ”, “ಕಾವೇರಿ ತೀರದಲ್ಲಿ ಒಂದು ನಾಡು”, “ಸಂತೋಷ ಆಹಾ ಸಂಗೀತಾ ಓಹೋ”, “ಬೇಲೂರ ಗುಡಿಯಲ್ಲಿ, ಶಿಲೆಯಾಗಿ ನಿಂತೋಳೆ”, “ಇಸವಿಯು ಏನೋ ಎಪ್ಪತ್ತಾರು, ವೇಷವ ನೋಡು ಇಪ್ಪತ್ತಾರು”, “ನೀ ಬರೆದ ಒಲವಿನ ಓಲೆ”, “ಇದೇ ನೋಡಿ ಮಂತ್ರಾಲಯ”, “ನೀ ಬರೋ ದಾರಿಯಲಿ ಹಾಸಿಹೇ ಪ್ರೀತಿಯಲಿ”, “ಹೊಸಬಾಳಿನ ಹೊಸಿಲಲಿ”, “ಜಗದೀಶ, ಸರ್ವೇಶ, ಮಲ್ಲೇಶ ಗೌರೀಶ ನೂರಾರು ಹೆಸರು ಶಿವನೀಗೆ”… ಹೀಗೆ ಪುಟಗಟ್ಟಲೆ ಬೆಳೆಯುತ್ತಾ ಹೋಗುತ್ತವೆ.

ಅಷ್ಟೇ ಅಲ್ಲ ಮಂಜುನಾಥ, ಮೂಕಾಂಬಿಕಾ, ಶಿವ ಸ್ತುತಿ, ವಿನಾಯಕ, ರಾಘವೇಂದ್ರ ಮುಂತಾದ ದೇವರನಾಮದ ಸುಮಧುರ ಭಕ್ತಿಗೀತೆಗಳ ಹಲವಾರು ಕ್ಯಾಸೆಟ್‍ಗಳ ಬೃಹತ್ ಕಾಣಿಕೆಯನ್ನೇ ಕನ್ನಡಕ್ಕಾಗಿ, ಕನ್ನಡಿಗರಿಗಾಗಿ ಕೊಟ್ಟು ನಮ್ಮಿಂದ ಮರೆಯಾಗಿ ಹೊರಟು ಹೋಗಿದ್ದಾರೆ ರಂಗರಾವ್ ಅವರು. “ಇಂದಲ್ಲ ನಾಳೆ ಸಾಯೋದೇ ಎಲ್ಲರು” ನಿಜ ಆದರೆ, ಬದುಕಿರುವಾಗ ಸಾರ್ಥಕ ಜೀವನ ನಡೆಸುವವರೆಷ್ಟಿದ್ದಾರೆ?

ಕನ್ನಡದಲ್ಲಿ ಅತೀ ಹೆಚ್ಚು ಮಾರಾಟವಾಗಿ ದಾಖಲೆಯಾಗಿರುವ ಹಾಗೂ ಅತೀ ಹೆಚ್ಚು ಜನ ಕೇಳಿರುವ, ಬಹುಶಃ ಕನ್ನಡವೆನ್ನುವ ನುಡಿ ಇರುವರೆಗೂ, ಭಾದ್ರಪದದಲ್ಲಿ ಪ್ರತಿ ವರ್ಷವೂ ಬರುವ ಗಣೇಶನ ಹಬ್ಬದಲ್ಲಿ, ಅಷ್ಟೇಕೆ? ಪ್ರತಿದಿನ “ಮುಂಜಾನೆ ಮೂಡು”ತ್ತಿದ್ದ ಹಾಗೇ ನಮ್ಮ ನಾಲಿಗೆಯಲ್ಲಿ ನಲಿದಾಡುವ “ಶರಣು ಶರಣಯ್ಯ ಶರಣು ಬೆನಕ” “ಭಾದ್ರಪದ ಶುಕ್ಲದ ಚೌತಿಯಂದು” “ಮಲೆನಾಡಿನ ಐಸಿರಿ ಚೆಲುವಿನ ವರ ಶೃಂಗೇರಿ” “ಎದ್ದೇಳು ಮಂಜುನಾಥ, ಏಳು ಬೆಳಗಾಯಿತು” “ಇವಳೇ ವೀಣಾಪಾಣಿ”, “ನಂಬಿದೆ ನಿನ್ನಾ ನಾಗಭರಣ” ಮುಂತಾದ ಭಕ್ತಿರಸರಾಗಗಳ ಮಾಣಿಕ್ಯವನ್ನು ನಮಗೆ ಕೊಟ್ಟು “ಆ ಕರ್ಣನಂತೆ ದಾನಿ”ಯಾಗಿಹೋದ ಪ್ರೀತಿಯ ರಂಗರಾಯರೇ, ನಿಮ್ಮ “ನೂರೊಂದು ನೆನಪನ್ನು ನಮ್ಮ ಎದೆಯಾಳದಲ್ಲಿರಿಸಿ” ಹೋಗಿಬಿಟ್ಟಿರಲ್ಲಾ! ಬರಬಹುದಾದರೆ ಮತ್ತೆ ದಯಮಾಡಿ….

“ತೆರೆದಿದೆ ಮನೆ ಓ! ಬಾ ಅತಿಥಿ”

೧೯-೦೩-೨೦೧೦

You may also like...

Leave a Reply