ನಾನೇಕೆ ಡೈರಿ ಬರೆಯುತ್ತೇನೆ?


A Situational Image

ನಾನು ಎಷ್ಟೋ ಸಾರಿ ದಿನಚರಿ ಬರೆಯುವುದರ ಬಗ್ಗೆ ಲೆಕ್ಕಾಚಾರ ಹಾಕುತ್ತಿದ್ದೆ. ನಮ್ಮ ಮನಸ್ಸಿನಂತರ್ಭಾವಗಳನ್ನು ತೆರೆದಿಡುವುದರಲ್ಲಿ ತಪ್ಪಾದರೂ ಏನಿದೆ? ಮಡುಗಟ್ಟಿದಂತಿರುವ ನಮ್ಮ ಜೀವನೋತ್ಸಾಹಗಳನ್ನು ಕೆರಳಿಸಲು ಇದೊಂದು ಸಫಲ ಪ್ರಯತ್ನವೇ ಸರಿ. ಅದಕ್ಕೆಂದೇ ನಾವುಗಳು ನಮ್ಮ ಅಕೃತ್ಯಗಳನ್ನೂ ಪ್ರಾಮಾಣಿಕವಾಗಿ ದಾಖಲಿಸಬೇಕಾಗುತ್ತದೆ. ಇದರಿಂದ ನಮ್ಮ ನೆನಪಿಗೂ ಮೀರಿದದೆಷ್ಟೋ ಸತ್ಯಗಳು ನಂತರದ ದಿನಗಳಲ್ಲಿ ನೆನಪಿಗೆ ಬರುತ್ತವೆ. ಆಗ ನಾವು ನಮ್ಮ ಹಿಂದಿನ ಸ್ಥಿತಿ-ಗತಿಗಳ ತುಲನೆ ಮಾಡಲು ಕಾರ್ಯಮಗ್ನರಾಗುತ್ತೇವೆ. ಕಾಲದಡಿಯಲ್ಲಿ ಅದೃಶ್ಯವಾಗಿದ್ದ ಬಾಲ್ಯ, ಯೌವ್ವನ ಅಥವಾ ವೃದ್ಧಾಪ್ಯದ ನೆನಪನ್ನು ಕೆಣಕುತ್ತೇವೆ. ಆಗ ನಮ್ಮ ಸ್ಮೃತಿಯಿಂದೊರಬರುವ ಅನಂತ ಕೋಟಿ ನೆನಹುಗಳಿಗೆ ಪ್ರಸಕ್ತ ಪರಿಸ್ಥಿತಿಯನ್ನು ಹೋಲಿಸಿ ತಾಳೆ ಮಾಡಿ ನೋಡುತ್ತೇವೆ. ಆಗ ನಮ್ಮಲ್ಲಿ ಒಂದು ರೀತಿಯ ಹರ್ಷೋಲ್ಲಾಸ ರೂಪು ಪಡೆಯುತ್ತದೆ. ಗತಿಸಿಹೋದ ನೆನಪುಗಳನ್ನು ಕೆದಕಿದಷ್ಟೂ ಹಿಗ್ಗು ನಮಗೆ. ಮಾತಿಗೂ ಎಟುಕದ ಮಜದ ಅನುಭವ. ಆಗ ಮೆಲ್ಲಗೆ ಮುಗುಳ್ನಗುತ್ತೇವೆ ಡೈರಿಯ ಪುಟಗಳನ್ನು ತಿರುವುತ್ತಾ…

ಅಥವಾ ಒಂದು ವೇಳೆ ನಮ್ಮ ಭೂತಕಾಲವು ಭೀಮಾಕಾರವಾಗಿದ್ದಲ್ಲಿ ಅಥವ ಬೀಭತ್ಸತೆಯಿಂದ ಕೂಡಿದ್ದಲ್ಲಿ, ಡೈರಿಯ ಹಾಳೆಗಳನ್ನು ಲಗುಬಗನೆ ಮಗಚುತ್ತೇವೆ. ದಿನಚರಿಯೋ, ವಾರಚರಿಯೋ, ವರ್ಷಚರಿಯೋ ಅಥವಾ ಇನ್ಯಾವುದೋ ಅನರ್ಥ ಬರವಣಿಗೆಯೋ ಎಂದೆನಿಸಿ, ಕೊನೆಗೊಂದೂ ಅರ್ಥವಾಗದೆ ಅಸ್ಪಷ್ಟತೆಯಿಂದ ಗೊಂದಲಗೊಂಡು ಮನಸ್ಸಿಗೆ ಬೇಸರಿಕೆ ಆವರಿಸಿದಂತಾಗುತ್ತದೆ. ಆಗ ಖಿನ್ನವದನರಾಗಿ ಅಲಕ್ಷ್ಯದಿಂದ ಡೈರಿಯನ್ನು ಮುಚ್ಚುತ್ತೇವೆ.

ನಾನೂ ಸಹ ಬರೆದರೆ ಯಾವುದಾದರೊಂದು ಅನುಭವವನ್ನು ಅನುಭವಿಸಿಯೇ ತೀರುತ್ತೇನಾದರೂ, ಬರೆಯುವ ವಿಷಯ ಬಂದಾಗ ಬಾರೀ ಸೋಮಾರಿ. ಒಂದು ರೀತಿಯ ಉಪೇಕ್ಷಾತನವೆಂದರೂ ಸರಿಯೇ. ಬರೆಯುವುದು ಖಂಡಿತಾ ನನ್ನಿಂದ ಆಗದ ಕೆಲಸವೆಂದೇ ನನ್ನ ಭಾವನೆ. ಆದರೂ ಭವಿಷ್ಯದಲ್ಲಿ ಕಾಣಸಿಗುವ ಮಜಕ್ಕಾಗಿ ಅಥವಾ ಪ್ರಾಯಶ್ಚಿತ್ತ ನಿಮಿತ್ತವಾಗಿ ಉತ್ಸುಕನಾಗಿ ಬರೆಯುವ, ಬರೆದುದನಂಚುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.

೧೮-೦೭-೧೯೯೪

You may also like...

Leave a Reply